

ಗುಂಡ್ಲುಪೇಟೆ: ಬಂಡೀಪುರದ ಅರಣ್ಯ ಪ್ರದೇಶ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ವಿನಾಶದಂಚಿನಲ್ಲಿರುವ ಅಪರೂಪದ ಹೈನಾ (ಕತ್ತೆಕಿರುಬ) ಕಂಡುಬಂದಿದ್ದು, ಅವುಗಳನ್ನು ರಕ್ಷಿಸಲು ಸ್ವಯಂ ಸೇವಕರು ಹಾಗೂ ಅರಣ್ಯ ಇಲಾಖೆಯವರು ಮುಂದಾಗಿದ್ದಾರೆ.
ಸುಮಾರು 10 ವರ್ಷಗಳ ಹಿಂದೆ ಬಂಡೀಪುರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೈನಾಗಳು ನಂತರದ ದಿನಗಳಲ್ಲಿ ಕಣ್ಮರೆಯಾಗಿದ್ದವು. ಆದರೆ ಕೆಲವು ದಿನಗಳ ಹಿಂದೆ ಕುಂದಕೆರೆ ವಲಯದ ಅರಣ್ಯ ಪ್ರದೇಶಗಳಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಅಧಿಕಾರಿಗಳಿಗೆ ಹೈನಾಗಳು ಕಂಡುಬಂದಿದ್ದವು. ಮನುಷ್ಯರನ್ನು ಕಂಡರೆ ನಾಚಿಕೊಳ್ಳುವ ಇವು ರಾತ್ರಿ ವೇಳೆ ಮಾತ್ರ ಸಂಚರಿಸುತ್ತವೆ. ಅಪರೂಪದ ವನ್ಯಜೀವಿಗಳ ಮೇಲೆ ಕಣ್ಣಿಟ್ಟಿದ್ದ ಅರಣ್ಯ ಇಲಾಖೆ ಇವುಗಳ ಚಲನವಲನ ಪತ್ತೆಗೆ ಕ್ಯಾಮರಾಗಳನ್ನು ಅಳವಡಿಸಿತ್ತು.
ಕೆಲವು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಇವು ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಇವು ಮಂಗಲ ಹಾಗೂ ಜಕ್ಕಹಳ್ಳಿ ಗ್ರಾಮದ ಸಮೀಪದಲ್ಲಿರುವ ಮಹದೇಶ್ವರನ ಕೆರೆ ಹಾಗೂ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರಿಗೆ ಕಾಣಿಸಿಕೊಂಡಿವೆ. ಹೈನಾಗಳು ಗ್ರಾಮದ ಕೆರೆಯಲ್ಲಿ ನೀರು ಕುಡಿಯಲು ಬಂದಿದ್ದಾಗ ಸ್ಥಳೀಯರು ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಯಲಚಟ್ಟಿ ಬೀಟ್‌ನಲ್ಲಿ 2012ರ ಫೆಬ್ರವರಿ ತಿಂಗಳಲ್ಲಿ ಕತ್ತೆಕಿರುಬಗಳು ಓಡಾಡುತ್ತಿದ್ದ ಫೋಟೋ ಸೆರೆ ಹಿಡಿಯಲಾಗಿತ್ತು. ಅದಕ್ಕೂ ಮುನ್ನ 1980ರ ದಶಕದಲ್ಲಿ ಉಲ್ಲಾಸ್ ಕಾರಂತ್ ಅವರು ಮುದುಮಲೈ ಹಾಗೂ ಬಂಡೀಪುರದಲ್ಲಿ ಹೈನಾ (ಕತ್ತೆಕಿರುಬ) ಇರುವುದನ್ನು ಪತ್ತೆ ಹಚ್ಚಿದ್ದರು.
ಸದಾ ಅರಣ್ಯದಲ್ಲಿ ಓಡಾಡುತ್ತಿದ್ದ ಹೈನಾಗಳು ಕೆಲವು ದಿನಗಳಿಂದ ಕಣ್ಮರೆಯಾಗಿದ್ದವು. ಇದರಿಂದ ಇವು ಕಾಡಂಚಿನ ಗ್ರಾಮಗಳತ್ತ ಸ್ಥಳಾಂತರವಾಗಿರುವ ಬಗ್ಗೆ ಅನುಮಾನ ಮೂಡಿತ್ತು. ಇತ್ತೀಚೆಗೆ ಕಾಡಂಚಿನ ಗ್ರಾಮಗಳಲ್ಲಿ ಸತ್ತ ಜಾನುವಾರುಗಳನ್ನು ಬೀಸಾಡಲಾಗುತ್ತಿದ್ದು ಹೈನಾಗಳು ಇವುಗಳ ಮಾಂಸ ತಿಂದು ಪರಿಸರವನ್ನು ಶುಚಿಯಾಗಿಡುತ್ತಿವೆ. ಆದ್ದರಿಂದ ಸಾರ್ವಜನಿಕರು ಹೈನಾಗಳ ಮೇಲೆ ಆಕ್ರಮಣ ಮಾಡದಿರುವಂತೆ ಅರಿವು ಮೂಡಿಸಲಾಗುತ್ತಿದೆ.
ಮಂಜುನಾಥ್, ಪರಿಸರ ಪ್ರೇಮಿ, ಹಂಗಳ
ರಾತ್ರಿ ಗಸ್ತು ಸಂದರ್ಭದಲ್ಲಿ ಅಪರೂಪದ ಹೈನಾಗಳು ಕಂಡುಬಂದಿದ್ದರಿಂದ ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅವು ಸಂಚರಿಸುತ್ತಿದ್ದ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸಿ ಒಟ್ಟು ಐದು ಹೈನಾಗಳ ಫೋಟೋ ಸೆರೆಯಾಗಿದೆ.
ಎನ್.ಪಿ.ನವೀನ್‌ಕುಮಾರ್, ಕುಂದಕೆರೆ ವಲಯದ ಆರ್‌ಎಫ್‌ಒ