ಬೆಳೆ ನಷ್ಟ ಪರಿಹಾರ ಕೋರಿ ರಾಜ್ಯಪಾರಿಗೆ ಮನವಿ

10rajesh9
Published on

ಚಾಮರಾಜನಗರ: ರಾಜ್ಯ ಸರ್ಕಾರ ಬರ ಪರಿಹಾರ ನೀಡುವಲ್ಲಿ ವೈಜ್ಞಾನಿಕ ವಿಧಾನ ಅನುಸರಿಸಿಲ್ಲ. ಕಳೆದ ಮೂರು ದಿನಗಳಿಂದ ಬಿದ್ದ ಬಿರುಗಾಳಿ ಸಹಿತ ಮಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಹಕ್ಕೊತ್ತಾಯ ಸಲ್ಲಿಸಿದರು.

ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಬೆಂಗಳೂರಿನ ರಾಜಭವನದಲ್ಲಿ ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿದ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದರು. ಈ ವೇಳೆ ಭಾಗ್ಯರಾಜ್ ಮಾತನಾಡಿ, ರೈತರಿಗೆ ಬರ ಪರಿಹಾರ ನೀಡುವಲ್ಲಿ ಸರ್ಕಾರ ವೈಜ್ಞಾನಿಕ ವಿಧಾನವನ್ನು ಅನುಸರಿಸಿಲ್ಲ. ಕಳೆದ ಮೂರು ದಿನಗಳ ಹಿಂದೆ ಬೀಸಿದ ಬಿರುಗಾಳಿಗೆ ಬಾಳೆ, ಕಬ್ಬು, ತೆಂಗು, ಮೆಕ್ಕೆಜೋಳ ನಾಶವಾಗಿದೆ. ವೈಜ್ಞಾನಿಕವಾಗಿ ಬೆಳೆ ನಷ್ಟ ಪರಿಹಾರವನ್ನು ಘೋಷಿಸಬೇಕು. ನೊಂದ ರೈತರ ಸಾಲ ಮನ್ನ ಮಾಡಬೇಕು ಎಂದು ಹೇಳಿದರು.

ಬಾಳೆ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ದರ ನೀಡಬೇಕು. ಬರ ಪರಿಹಾರದಲ್ಲಿ ತಾರತಮ್ಯ ಮಾಡಬಾರದು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ 10 ಗಂಟೆ ವಿದ್ಯುತ್ ಕೊಡಬೇಕು. ಪಂಪ್‌ಸೆಟ್‌ಗಳಿಗೆ ಹೊಸ ಸಂಪರ್ಕ ಪಡೆಯಲು ಅಕ್ರಮ-ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ಕಬ್ಬು ಬೆಳೆಗಾರರಿಗೆ ಕಳೆದ ಸಾಲಿನ 950 ಕೋಟಿ ರೂ. ಬಾಕಿ ಬರಬೇಕು. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 10 ರೂ. ಕೊಡಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಬ್ಯಾಂಕ್‌ಗಳಲ್ಲಿ ರೈತರು ಸಾಲ ಪಡೆಯಲು ಸಿಬಿಲ್ ಸ್ಕೋರ್ ಪರಿಗಣಿಸಬಾರದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ವಸಪಡಿಸಿಕೊಂಡಿರುವ ಮತ್ತು ಬಿ ಖರಾಬುಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಕಟ್ಟಡಗಳನ್ನು ಕಟ್ಟಿ ಸಾರ್ವಜನಿಕ ಆಸ್ತಿಯನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ರಕ್ಷಣೆ ನೀಡುವ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರಾಜ್ಯ ಕಾರ್ಯಾಧ್ಯಕ್ಷ ತೇಜಸ್ವಿ ಪಟೇಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠಲ್ ಬಿ ಗಣಾಚಾರಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಹನುಮಯ್ಯ, ವಕೀಲ ಕಿಶಾನ್, ಹರ್ಷಕುಮಾರ್, ಮಲಿಯೂರು ಮಹೇಂದ್ರ, ಅರಳಿಕಟ್ಟೆ ಕುಮಾರ್, ಮುದ್ದಹಳ್ಳಿ ಚಿಕ್ಕಸ್ವಾಮಿ,
ಗಣೇಶ್, ಮಹದೇವಸ್ವಾಮಿ, ಸೋಮೇಶ್, ನೆಲಮಂಗಲ ತಾಲೂಕು ಅಧ್ಯಕ್ಷ ರಾಜೇಶ್ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net