

ಚಾಮರಾಜನಗರ: ರಾಜ್ಯದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ನಡೆಸಿದ ಹೋರಾಟಗಳು ದಲಿತರಿಗೆ ಆಶಾಕಿರನವಾಗಿದ್ದು, ಅವರು ನೇರನುಡಿಗೆ ಹೆಸರಾಗಿದ್ದರು ಎಂದು ಪದವಿಪೂರ್ವೃ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಪರಿಶಿಷ್ಠ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಹಾಗೂ ಸಂಸದ ವಿ.ಶ್ರೀನಿವಾಸ್‌ಪ್ರಸಾದ್ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮಂತ್ರಿಯಾಗಿ ಉತ್ತಮ ರೀತಿಯಲ್ಲಿ ಸೇವೆಸಲ್ಲಿಸಿದ್ದ ವಿ.ಶ್ರೀನಿವಾಸ್‌ಪ್ರಸಾದ್ ಅವರ ಅಗಳಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ತತ್ವ-ಸಿದ್ಧಾಂತ ನೇರನುಡಿ ನಮ್ಮೆಲ್ಲರಿಗೂ ಆದರ್ಶವಾಗಬೇಕು. ಅವರ ಸ್ವಾಭಿಮಾನದ ರಾಜಕೀಯ ಜೀವನ ಇಂದಿನ ಯುವಪೀಳಿಗೆ ಅನುಸರಿಸಬೇಕಿದೆ ಎಂದು ಸಲಹೆ ನೀಡಿದರು.
ಪರಿಶಿಷ್ಠ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಕೃಷ್ಣಕುಮಾರ್ ಮಾತನಾಡಿ, ವಿ.ಶ್ರೀನಿವಾಸ್‌ಪ್ರಸಾದ್ ಮೈಸೂರು-ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದರು. ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು. ಮೂಲತಃ ಮೈಸೂರಿನ ಅಶೋಕಪುರಂನವರಾದ ಶ್ರೀನಿವಾಸಪ್ರಸಾದ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಇಲಾಖೆ ಸಚಿವರಾಗಿ ಅನೇಕ ಜನಪರವಾದ ಕೆಲಸಗಳನ್ನು ಮಾಡಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಶಿಷ್ಠ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ್ಯದರ್ಶಿ ನಂಜುಂಡಸ್ವಾಮಿ, ಖಜಾಂಚಿ ಪುಟ್ಟಸ್ವಾಮಿ, ಶಿವಮೂರ್ತಿ, ಕೃಷ್ಣಮೂರ್ತಿ, ಶಂಕರಪ್ಪ, ಈಶ್ವರ್, ನಟರಾಜು, ಎಂ.ಡಿ.ಮಹದೇವಯ್ಯ,ನಂಜರಾಜು, ಶಂಕರ್, ಸಿದ್ದರಾಜು, ಬಾಬು, ಜಯರಾಮು, ನಂದಿನಿ, ಮಹದೇವಸ್ವಾಮಿ, ಶ್ರೀಧರ್, ನಂದೀಶ್, ಜಯಶ್ರೀ, ಪುಟ್ಟಗೋಪಮ್ಮ ಹಾಗೂ ಇತರರು ಭಾಗವಹಿಸಿದ್ದರು.