

ಚಾಮರಾಜನಗರ: ಜಿಲ್ಲಾದ್ಯಂತ ಶ್ರೀರಾಮನವಮಿಯನ್ನು ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಣೆ ಮಾಡಲಾಯಿತು.
ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು ತಾಲೂಕುಗಳಲ್ಲಿರುವ ಶ್ರೀರಾಮ ಮಂದಿರಗಳಲ್ಲಿ ಪೂಜಾ ಕೈಂಕರ್ಯ ನೆರವೇರಿತು. ರಾಮಭಕ್ತರು ಮಜ್ಜಿಗೆ, ಪಾಲಕ ವಿತರಣೆ ಮಾಡಿದರು. ಚಾಮರಾಜನಗರದ ಮಾರಮ್ಮನ ದೇಗುಲದ ಬಳಿ ಭಕ್ತರು ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಮಾನವ ಜನ್ಮ ಸಾರ್ಥಕ: ಶ್ರೀರಾಮ ನಾಮಜಪದ ಮೂಲಕ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬಹುದು. ರಾಮ ನಾಮ ಜಪ ಮನಸ್ಸನ್ನು ಶುದ್ಧೀಕರಿಸಿ ಆಧ್ಯಾತ್ಮಿಕ ಮತ್ತು ದೈಹಿಕ ಶಕ್ತಿಯನ್ನು ವೃದ್ಧಿಸಿ ಆರೋಗ್ಯವಂತರಾಗಿ ಬಾಳಲು ಸಹಕಾರಿ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಋಗ್ವೇದಿ ತಿಳಿಸಿದರು.
ನಗರದ ಶಂಕರಪುರದಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಮನವಮಿ ಹಾಗೂ ಶ್ರೀರಾಮ ನಾಮ ಜಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಶ್ರೀರಾಮ ಹಾಗೂ ಶ್ರೀಕೃಷ್ಣ ಆಧಾರ ಸ್ತಂಭಗಳು. ಭಾರತೀಯರ ನರನಾಡಿಗಳಲ್ಲಿ ರಾಮ ಮತ್ತು ಕೃಷ್ಣ ಇದ್ದಾರೆ. ಧರ್ಮ ರಕ್ಷಣೆ, ಮಾನವ ಕಲ್ಯಾಣ, ಲೋಕದ ಹಿತ ನಮ್ಮ ಸಂಸ್ಕೃತಿಯ ದಿವ್ಯ ಚೇತನ ಎಂದರು.
ಶ್ರೀ ಶಾರದಾ ಭಜನಾ ಮಂಡಳಿಯ ಮಾಲಾ ರವಿ ಮಾತನಾಡಿ, ಶ್ರೀರಾಮನವಮಿ ಪ್ರತಿಯೊಬ್ಬರ ಹಬ್ಬವಾಗಿದ್ದು, ಸೀತಾರಾಮರ ಆದರ್ಶಗಳನ್ನು ತಿಳಿಯುವ ಸಂದರ್ಭವಾಗಿದೆ ಎಂದರು. ಬಳಿಕ ಶ್ರೀರಾಮ ನಾಮ ಜಪ ಕಾರ್ಯಕ್ರಮ ಜರುಗಿತು. ಜೈ ಹಿಂದ್ ಪ್ರತಿಷ್ಠಾನದ ಮುರುಗೇಶ್, ರವಿ, ರಘುನಾಥ್, ಶಾರದಾ ಭಜನಾ ಮಂಡಳಿಯ ನಾಗಶ್ರೀ, ಋಗ್ವೇದಿ ಯೂತ್ ಕ್ಲಬ್ನ ಸಾನಿಕಾ, ಶ್ರಾವ್ಯಾ ಎಸ್.ಋಗ್ವೇದಿ, ಸುಮನ್ ಇದ್ದರು.