ಪರಿಸರ ಸಮತೋಲನದ ಅರಿವು ಬಿಂಬಿಸಿದ ವಿದ್ಯಾರ್ಥಿಗಳು

025
Published on

ಚಾಮರಾಜನಗರ:ನಮ್ಮ ಸುತ್ತಮುತ್ತಲಿನ ಪ್ರಕೃತಿಯ ಉಪಯೋಗದ ಜತೆಗೆ, ಪ್ರಕೃತಿ ನಾಶದಿಂದಾಗುವ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳು ಚಿತ್ರಿಸುವ ಮೂಲಕ ಪರಿಸರ ಸಮತೋಲನದ ಅರಿವು ಮೂಡಿಸಿದರು.

ಪರಿಸರ ಜಾಗೃತಿಯ ಉದ್ದೇಶದಿಂದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ತೇಜಸ್ ಸೇವಾ ಸಂಸ್ಥೆ, ಪವನ್ ಸೇವಾ ಟ್ರಸ್ಟ್, ಐಸೆಟ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ನಗರದ ಸೇವಾ ಭಾರತೀ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಕಲ್ಪನೆಯ ಚಿತ್ರಗಳು, ಬಿಳಿಹಾಳೆಯಲ್ಲಿ ಬಣ್ಣವಾದವು. ಶಾಲೆಯ 8, 9, 10ನೇ ತರಗತಿಯ 35 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿ ಪರಿಸರದ ಸಂರಕ್ಷಣೆ, ಗಿಡ-ಮರಗಳ ಪೋಷಣೆ, ಮಾನವನ ದುರಾಸೆಯಿಂದಾಗುವ ಪರಿಸರ ಮಾಲಿನ್ಯದ ತೊಂದರೆಗಳನ್ನು ವಿದ್ಯಾರ್ಥಿಗಳು ಚಿತ್ರಗಳ ಮೂಲಕ ಕಟ್ಟಿಕೊಟ್ಟರು.

ಬಳಿಕ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರವನ್ನು ಶಾಲೆಯ ಮುಖ್ಯೋಪಾಧ್ಯಾಯ ಸಿ.ಪಿ.ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿ, ದೇಶದ ಜನರು ಪ್ರಕೃತಿಯನ್ನು ಪೂಜನೀಯ ಸ್ಥಾನದಲ್ಲಿ ನೋಡುತ್ತಾರೆ. ನಮ್ಮ ಸನಾತನ ಪರಂಪರೆಯಲ್ಲಿ ಪ್ರಕೃತಿಗೆ ಬಹುದೊಡ್ಡ ಸ್ಥಾನವನ್ನು ನೀಡಲಾಗಿದೆ.
ಜಗತ್ತಿನಲ್ಲಿ ಮಾನವ ಅತ್ಯಂತ ಬುದ್ಧಿವಂತ ಜೀವಿ ಎಂದು ಹೇಳಲಾಗುತ್ತದೆ. ಆದರೆ ಮಾನವನೇ ಪ್ರಕೃತಿಯ ನಾಶಕ್ಕೆ ಕಾರಣವಾಗುತ್ತಿದ್ದಾನೆ. ಮುಂದಿನ ಪೀಳಿಗೆಗಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸಬೇಕಾಗಿರುವುದು ಎಲ್ಲರ ಜವಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿ ಎಂದರು.

ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಆನಂದ್ ಭಗೀರಥ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದಾಗ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಪಾಡಿಕೊಳ್ಳುವಲ್ಲಿ ಅವರು ಶ್ರಮಿಸುತ್ತಾರೆ. ಮನುಷ್ಯನ ಸ್ವಾರ್ಥದಿಂದಾಗಿ ಪರಿಸರದ ಮೇಲೆ ನಿತ್ಯವೂ ಹಾನಿ ಉಂಟಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸುವ ಕೆಲಸಗಳು ಹೆಚ್ಚಾಗಿ ಆಗಬೇಕು ಎಂದರು.
ನಾಗವಳ್ಳಿ ಗ್ರಾ.ಪಂ ಸದಸ್ಯ ಪ್ರಶಾಂತ್ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರ ಹಾಗೂ ಭವ್ಯ ಇತಿಹಾಸವನ್ನು ಉಳಿಸುವಲ್ಲಿ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಪಾತ್ರ ಅಪಾರ. ಈ ಶಾಲೆಯ ವಿದ್ಯಾರ್ಥಿಗಳ ಶಿಸ್ತು, ಸಂಯಮ ಹಾಗೂ ಬಿಡಿಸಿರುವ ಚಿತ್ರಗಳೇ ಅವರ ಸಂಸ್ಕಾರವನ್ನು ಪ್ರಕೃತಿ ಮೇಲಿನ ಅವರ ಪ್ರೇಮವನ್ನು ಸಾರುತ್ತದೆ ಎಂದರು.

ತೇಜಸ್ ಸೇವಾ ಸಂಸ್ಥೆ ಅಧ್ಯಕ್ಷ ರವಿತೇಜ್, ಪವನ್ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಸಂಪತ್ ಕುಮಾರ್, ಚಿತ್ರಕಲಾವಿದ ಅನಿಲ್‌ಕುಮಾರ್, ಲೋಕೇಶ್, ಸಿನಿಮಾ ನಟ ಶ್ರೀಸಾಯಿ ಮಂಜು ಉಪಸ್ಥಿತರಿದ್ದರು.

ಬಹುಮಾನ ಪಡೆದ ವಿದ್ಯಾರ್ಥಿಗಳು:
ಸ್ಪರ್ಧೆಯಲ್ಲಿ ಅತ್ಯುತ್ತಮ ಚಿತ್ರ ಬಿಡಿಸಿದ ಮೂವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 10ನೇ ತರಗತಿಯ ವಿದ್ಯಾರ್ಥಿನಿ ಜಿ.ಭಾಗ್ಯಲಕ್ಷ್ಮೀ ಪ್ರಥಮ, 8ನೇ ತರಗತಿಯ ವಿದ್ಯಾರ್ಥಿಗಳಾದ ಸುಮತಿ ದ್ವಿತೀಯ ಹಾಗೂ ಡಿ.ಆಶಾ ತೃತೀಯ ಸ್ಥಾನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net