ಬಿಜೆಪಿ ಆಳ್ವಿಕೆಯಲ್ಲಿ ದೇಶ ದಿವಾಳಿಯಾಗಿದೆ

Kerehalli Naveen
Published on

ಚಾಮರಾಜನಗರ: ದೇಶವನ್ನು ವಿಶ್ವಗುರು ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶವೇ ದಿವಾಳಿಯಾಗಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಾಧ್ಯಮ ಸಂಯೋಜಕ ಕೆರೆಹಳ್ಳಿ ನವೀನ್ ಆರೋಪಿಸಿದರು.

ನಾವು ಅಧಿಕಾರಕ್ಕೆ ಬಂದರೆ ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಲೋಕಪಾಲ್ ವಸೂದೆ ಜಾರಿಗೆ ತರುತ್ತೇವೆ. ನದಿಗಳ ಜೋಡಣೆ ಮಾಡುತ್ತೇವೆ. ಸ್ಮಾರ್ಟ್ ಸಿಟಿಗಳನ್ನು ನಿರ್ಮಾಣ ಮಾಡುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಚುನಾವಣಾ ಬಾಂಡ್ ಮೂಲಕ ನೇರವಾಗಿ ಲಂಚ ಪಡೆದಿರುವುದಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಇಡಿ, ಸಿಬಿಐ ಹಾಗೂ ಇನ್ನಿತರ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಕೈಗೊಂಬೆಯಂತೆ ನಡೆಸಿಕೊಳ್ಳುತ್ತಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದರು. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಶದ ಸಾಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ದ್ವಿಗುಣವಾಗಿದ್ದು ತಲಾದಾಯವು ಕುಸಿದಿದೆ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಿದ್ದ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಹಾಗೂ ಮುಚ್ಚುವ ಕೆಲಸ ಮಾಡಿದರು. ಚುನಾವಣೆಯ ಸಂದರ್ಭದಲ್ಲಿ ರೈತರ ಬಗ್ಗೆ ಮಾತನಾಡುತ್ತಾರೆ. ಆದರೆ, ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದರು. ಕಾಂಗ್ರೆಸ್ ಯೋಜನೆಗಳನ್ನು ಹೆಸರು ಬದಲಾಯಿಸಿ ಅದನ್ನೇ ಜಾರಿಗೊಳಿಸಿ ನಮ್ಮ ಯೋಜನೆಗಳು ಎಂದು ಹೇಳಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಂದ ದಂಡದ ರೂಪದಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜನರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

ಚಾ.ನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿರುವ ಸುನೀಲ್‌ಬೋಸ್ ಸುನೀಲ್ ಬೋಸ್ ಗೋಬ್ಯಾಕ್ ಎಂಬುದು ವಿರೋಧ ಪಕ್ಷದ ಕುತಂತ್ರವಾಗಿದೆ. ಅವರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ದಿ.ಆರ್.ಧ್ರುವನಾರಾಯಣ ಅಭಿಮಾನಿಗಳು ಪಕ್ಷ ನಿಷ್ಠೆಗೆ ಹೆಸರುವಾಸಿಯಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸೋಣ ಎಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆರ್.ಮಹದೇವ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್‌ಗೆ ಧ್ರುವನಾರಾಯಣ ಅವರ ಮೇಲೆ ನಿಜವಾದ ಗೌರವವಿದ್ದರೆ ಅವರ ಪುತ್ರ ನಂಜನಗೂಡಿನಲ್ಲಿ ಸ್ಪರ್ಧೆ ಮಾಡಿದ್ದಾಗ ಸಹಕಾರ ನೀಡಬೇಕಿತ್ತು. ಈಗ ವೋಟಿಗಾಗಿ ಧ್ರುವನಾರಾಯಣ ಅವರನ್ನು ಸ್ಮರಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.

ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಶ್ರೀನಿವಾಸ್ ನಾಯಕ, ಮುಖಂಡ ಬಸಪ್ಪನಪಾಳ್ಯ ನಟರಾಜ್, ಮಹದೇವಶೆಟ್ಟಿ, ಸಯ್ಯದ್ ಮುಸೈಬ್, ರಾಜೇಶ್ ಗೌಡಹಳ್ಳಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net