

ಚಾಮರಾಜನಗರ: ನಾವೆಲ್ಲರು ಅಂಬೇಡ್ಕರ್ ಅನುಯಾಯಿಗಳು, ಎಡಗೈ, ಬಲಗೈ ಎಂಬ ಬೇಧಬಾವ ಇಲ್ಲ. ನಮ್ಮದು ಒಂದೇ ಕೈ ಅದು ಅಂಬೇಡ್ಕರ್ ಕೈ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ವರ್ತಕರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗ ಸಮುದಾಯದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸಂವಿಧಾನ ಆಶಯಗಳನ್ನು ಜಾರಿ ಮಾಡುವ ಕೆಲಸ ನಮ್ಮದಾಗಿದೆ. ನಿಮ್ಮ ಪರ ಧ್ವನಿ ಮಾಡುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಈ ಚುನಾವಣಾ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸುವ ಪ್ರಶ್ನೆ ಯಾಗಿದೆ ಎಂದರು.
ನಾವೆಲ್ಲರು ಅಂಬೇಡ್ಕರ್ ಅನುಯಾಯಿಗಳು, ಎಡಗೈ, ಬಲಗೈ ಎಂಬ ಬೇಧಬಾವ ಇಲ್ಲ. ನಮ್ಮದು ಒಂದೇ ಕೈ ಅದು ಅಂಬೇಡ್ಕರ್ ಕೈ ಆಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುವುದು ನಮ್ಮೆಲ್ಲರ ಒತ್ತಾಸೆಯಾಗಿದೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ನಂಬಿಕೆಯನ್ನುಟ್ಟುಕೊಂಡು ಕೆಲಸ ಮಾಡುತ್ತಿದೆ. ಆದರೆ, ಬಿಜೆಪಿ ಸಂವಿಧಾನ ವಿರುದ್ದವಾಗಿದ್ದು, ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಇದರಿಂದ ಜಾಗೃತರಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಸಂವಿಧಾನದ ಸಂರಕ್ಷಣೆಗೆ ನಿಲ್ಲಬೇಕು ಎಂದರು.
ಎಸ್‌ಇಪಿ, ಟಿಎಸ್‌ಪಿ ಕಾಯ್ದೆ ಸಂವಿಧಾನ ಪೂರಕವಾಗಿದ್ದು, ಇದನ್ನು 2013ರಲ್ಲಿ ಸಚಿವನಾಗಿದ್ದಾಗ ಅಂಜನೇಯ ಅವರ ಸಹಕಾರದೊಂದಿಗೆ ಜಾರಿ ಮಾಡಿದೆವು. ಇದರಿಂದ ದಲಿತರ ಕಾಲೋನಿಗಳು ಅಭಿವೃದ್ದಿಯಾದವು. ಇಡೀ ದೇಶದಲ್ಲಿ ಮೊಟ್ಟ ಮೊದಲ ಅಂಬೇಡ್ಕರ್ ಜಾಗೃತಿ ಜಾಥಾವನ್ನು ಆಯೋಜನೆ ಮಾಡಿದ್ದು, ನಮ್ಮ ಸರ್ಕಾರ. ಇದು ಇತರೇ ರಾಜ್ಯಗಳಿಗೆ ಮಾದರಿಯಾಗಿದೆ. ಇದರ ಉದ್ದೇಶ ಸಮುದಾಯಗಳು ಗಟ್ಟಿಯಾಗಬೇಕೆಂಬದಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ನುಡಿದಂತೆ ನಡೆದ ಪಕ್ಷವಾಗಿದೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಎಲ್ಲಾ ವರ್ಗದವರಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ. ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಈ ಬಾರಿ ಸುನೀಲ್ ಬೋಸ್ ಅವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್,ಜಿ.ಪಂ. ಮಾಜಿ ಸದಸ್ಯ ಕೆ.ಪಿ. ಸದಾಶಿವಮೂರ್ತಿ, ರಾಜ್ಯ ಉಪಾಧ್ಯಕ್ಷ ಸಿ.ಎ. ಮಹದೇವಶೆಟ್ಟಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಮಗದ ಮಾಜಿ ನಿರ್ದೇಶಕ ಶಿವಮೂರ್ತಿ, ಮುಖಂಡರಾದ ಎಚ್.ಎಚ್. ನಾಗರಾಜು, ಎನ್. ವಿನೋದ್, ಗುಂಡ್ಲುಪೇಟೆ ದೇವರಾಜು, ಸೇವಾದಳದ ಜಿಲ್ಲಾದ್ಯಕ್ಷ ಹೊಂಗನೂರು ಜಯರಾಜ್, ಕೊಳ್ಳೇಗಾಲ ಬಾಲರಾಜು, ಸೋಮು, ಪಾಳ್ಯ ರಾಚಪ್ಪ, ಬೂದಬಾಳು ಮಹದೇವ್, ಸುರೇಶ್, ಹೂಗ್ಯಂ ಸಂಪತ್ತು, ವೀರಪ್ಪ, ಗುಂಡ್ಲುಪೇಟೆ ಪುರಸಭಾ ಮಾಜಿ ಅಧ್ಯಕ್ಷ ರಂಗಸ್ವಾಮಿ, ನಿಟ್ರೆ ಮಹದೇವ್, ಯಳಂದೂರು ರಾಜಣ್ಣ ಹಾಗೂ ಇತರರು ಹಾಜರಿದ್ದರು.