

ಚಾಮರಾಜನಗರ: ಚಾ.ನಗರ ಲೋಕಸಭಾ ಚುನಾವಣೆ ಏ.26 ರಂದು ನಡೆಯಲಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಿ ಸದೃಢ ಭಾರತ ನಿರ್ಮಾಣಕ್ಕೆ ಸಹಕರಿಸಿ ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ಮನವಿ ಮಾಡಿದರು.
ನಗರಸಭಾ ವ್ಯಾಪ್ತಿಯ ವಾರ್ಡ್ ನಂ.14ರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏ.26ಕ್ಕೆ ಮೊದಲ ಹಂತ, ಮೇ.7ಕ್ಕೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಪ್ರತಿಯೊಬ್ಬರೂ ಕೂಡಾ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಚುನಾವಣಾ ಪರ್ವ ದೇಶದ ಗರ್ವ ಎಂಬ ಘೋಷವಾಕ್ಯದ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮತದಾನದ ಹಬ್ಬ ಏ.26ರಂದು ನಡೆಯಲಿದೆ. ಎಲ್ಲರೂ ಕೂಡಾ ತಪ್ಪದೇ ತಮ್ಮ ಬೂತ್‌ಗಳಲ್ಲಿ ಮತವನ್ನು ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಗಳನ್ನು ತಾವೇ ಆಯ್ಕೆಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಯೋಜನಾಧಿಕಾರಿ ವೆಂಕಟನಾಯಕ್ ಮಾತನಾಡಿ, ಏ.26 ರಂದು ಮತದಾನದ ಹಬ್ಬವನ್ನು ಆಚರಿಸುತ್ತಿದ್ದೇವೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕೂಡಾ ಮತದಾನ ಮಾಡುವ ಸಮಾನ ಹಕ್ಕನ್ನು ಕೊಟ್ಟಿದೆ. ಎಲ್ಲರೂ ಕೂಡಾ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.
ನಗರಸಭಾ ಸಿಆರ್‌ಪಿ ನರ್ಗೀಸ್ ಬಾನು ಮಾತನಾಡಿ, ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಸಮರ್ಥ ನಾಯಕರನ್ನು ಆಯ್ಕೆಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮತದಾನ ಎಂಬುದು ಎಲ್ಲರ ಸಾರ್ವಭೌಮ ಹಕ್ಕು ಅದನ್ನು ಪ್ರತಿಯೊಬ್ಬರೂ ಚಲಾಯಿಸುವ ಮೂಲಕ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸಿಆರ್‌ಪಿ ಜ್ಯೋತಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರಾಮಚಂದ್ರು, ಕಂದಾಯ ಅಧಿಕಾರಿ ಶರವಣ, ಸಿಆರ್‌ಪಿ ರೂಪಾ, ಸಿಬ್ಬಂದಿಗಳಾದ ನವೀನ್ ಹಾಗೂ ಇತರರು ಭಾಗವಹಿಸಿದ್ದರು.