

ಚಾಮರಾಜನಗರ: ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಪುತ್ರ ಮತ್ತು ತಾಲೂಕಿನ ಚಂದಕವಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಆರ್.ಬಾಲರಾಜು ಏ.12ರಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ನಗರದ ವರ್ತಕರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಚಂದಕವಾಡಿ ಜಿಪಂ ಕ್ಷೇತ್ರ ವ್ಯಾಪ್ತಿಯ ಸಭೆಯಲ್ಲಿ ಅಭಿಮಾನಿಗಳ ಅಭಿಪ್ರಾಯ ಪಡೆದು ಈ ನಿರ್ಧಾರ ಪ್ರಕಟಿಸಿದರು. ಏ.12 ರಂದು ಕೊಳ್ಳೇಗಾಲದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಚಂದಕವಾಡಿ ಹೋಬಳಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಲಾಯಿತು.
ಇದಕ್ಕೆ ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದ ಮುಖಂಡರು ತಾವೆಲ್ಲರೂ ಜತೆಗೆ ಇರುವುದಾಗಿ ಹೇಳಿದರು. ಕೋಡಿಮೊಳೆ ರಾಚಶೆಟ್ಟಿ, ನಗರಸಭೆ ಮಾಜಿ ಸದಸ್ಯ ಬಸವರಾಜು, ಕಾಗಲವಾಡಿ ಗ್ರಾಪಂ ಮಾಜಿ ಅಧ್ಯಕ್ಷ ನಟಶೇಖರ್, ಮುಖಂಡರಾದ ನಾಗಮಲ್ಲೇಶ್, ಮಹದೇವಪ್ಪ, ರಾಮಸಮುದ್ರ ಪ್ರಸನ್ನ, ಜೆ.ಎಂ.ಮರಿಸ್ವಾಮಿ, ಸರಗೂರು ಮೋಳೆ ಅಸ್ಲಂ ಮತ್ತು ಇತರರು ಹಾಜರಿದ್ದರು.