

ಚಾಮರಾಜನಗರ: ರಾಜ್ಯ ಸರ್ಕಾರ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ- 2023 ಅನ್ನು ಅಂಗಿಕಾರ ಮಾಡಿರುವುದಕ್ಕೆ ಜಿಲ್ಲಾ ವಕೀಲರ ಸಂಘದ ಸದಸ್ಯರು ಸಂಭ್ರಮಾಚರಣೆ ಮಾಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಗುಂಪುಗೂಡಿದ ಸದಸ್ಯರು ಕಕ್ಷಿದಾರರು, ನ್ಯಾಯಾಂಗ ಇಲಾಖೆ ನೌಕರರಿಗೆ ಸಿಹಿ ಹಂಚಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ರಾಜ್ಯದಲ್ಲಿ ವಕೀಲರ ಮೇಲೆ ದಿನೇ ದಿನೇ ಹಲ್ಲೆ, ದೌರ್ಜನ್ಯ, ಪೊಲೀಸ್ ದೌರ್ಜನ್ಯ ನಡೆಯುತ್ತಿದ್ದವು. ಇವುಗಳ ವಿರುದ್ಧ ಹಲವು ವರ್ಷಗಳಿಂದ ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರುವಂತೆ ಪ್ರತಿಭಟನೆಗಳ ಮೂಲಕ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದರು.
2022ರ ಡಿ.13ರಂದು ಚಾಮರಾಜನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸಂರಕ್ಷಣಾ ಕಾಯ್ದೆ ಜಾರಿಗಾಗಿ ಮನವಿ ಕೂಡ ಸಲ್ಲಿಸಿದ್ದೆವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಾರಿ ಮಾಡುವ ಭರವಸೆಯನ್ನು ನೀಡಿದ್ದರು. ಜತೆಗೆ ರಾಜ್ಯದ ಎಲ್ಲ ವಕೀಲರ ಸಂಗಳು ನಿರಂತರ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದವು. ಇದರ ಹೋರಾಟದ ಲವಾಗಿ ಇಂದು ವಕೀಲರ ಸಂರಕ್ಷಣಾ ಕಾಯ್ದೆ ಅಂಗಿಕಾರವಾಗಿದೆ. ಇದು ವಕೀಲರ ಹೋರಾಟಕ್ಕೆ ಸಂದ ಲವಾಗಿದೆ ಎಂದು ಹೇಳಿದರು.
ಈ ವಿಧೇಯಕದಲ್ಲಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನಿಂದ ಪ್ರಮಾಣ ಪತ್ರವನ್ನು ಹೊಂದಿರುವ ವಕೀಲರ ಮೇಲೆ ಯಾವುದೇ ವ್ಯಕ್ತಿಗಳು ಹಲ್ಲೆ, ದೌರ್ಜನ್ಯಗಳನ್ನು ನಡೆಸಿದರೆ, ವಕೀಲರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಈ ಕಾನೂನಿನ ಅಡಿಯಲ್ಲಿ 3 ವರ್ಷಗಳ ಕಾಲ ಶಿಕ್ಷೆ, ಒಂದು ಲಕ್ಷ ರೂ.ಗಳವರೆಗೆ ದಂಡವನ್ನು ವಿಧಿಸಬಹುದಾಗಿದೆ ಎಂದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಮಂಜು ಹರವೆ, ಪ್ರಧಾನ ಕಾರ್ಯದರ್ಶಿ ಎನ್.ಕೆ.ವಿರೂಪಾಕ್ಷಸ್ವಾಮಿ, ಜಂಟಿ ಕಾರ್ಯದರ್ಶಿ ಮಲ್ಲು, ಹಿರಿಯ ವಕೀಲರಾದ ಪುಟ್ಟರಾಜು, ಆರ್.ವಿರೂಪಾಕ್ಷ, ಎಂ. ಶಿವಲಿಂಗೇಗೌಡ, ವಿ.ನಾಗರಾಜೇಂದ್ರ, ಕೆ.ಎಸ್.ಗಣೇಶ್‌ಪ್ರಸಾದ್, ಬಿ.ಜಿ.ಜಯಪ್ರಕಾಶ್, ನಂಜುಂಡಯ್ಯ, ಎಚ್.ಎನ್.ಲೋಕೇಶ್, ಎಂ.ಶಿವರಾಮ್, ಜೆ.ಸುಬ್ರಮಣ್ಯ, ನಾಗಮ್ಮ, ಎಂ.ಆರ್.ಸವಿತಾ, ಎಂ.ನಂಜುಂಡಸ್ವಾಮಿ ಇತರರು ಇದ್ದರು.