ಶ್ರೀ ಕ್ಷೇತ್ರ ನೈರ್ಮಲ್ಯಕ್ಕೆ ಸಹಕಾರ ನೀಡುವಂತೆ ಮನವಿ

06 HANUR 4 A
Published on

ಹನೂರು: ಅಂಗಡಿ ತ್ಯಾಜ್ಯವನ್ನು ಕಡ್ಡಾಯವಾಗಿ ಕಸದ ತೊಟ್ಟಿಯಲ್ಲಿ ಹಾಕುವುದರ ಮೂಲಕ ಕ್ಷೇತ್ರದ ನೈರ್ಮಲ್ಯಕ್ಕೆ ಸಹಕಾರ ನೀಡಬೇಕು ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ತಿಳಿಸಿದರು.

ಮ.ಬೆಟ್ಟದ ಅಂಗಡಿ ಮಳಿಗೆಗಳ ಸಂಕೀರ್ಣಗಳಿಗೆ ಶನಿವಾರ ಭೇಟಿ ನೀಡಿದ್ದ ವೇಳೆ ಭಕ್ತರು ಸಂಚರಿಸುವ ಮಾರ್ಗದಲ್ಲಿ ಅಂಗಡಿ ತ್ಯಾಜ್ಯ ಬಿದ್ದಿರುವುದನ್ನು ಕಂಡು ಅವರು ಸಾರ್ವಜನಿಕರ ಜತೆ ಮಾತನಾಡಿದರು.‘

ಮ.ಬೆಟ್ಟವನ್ನು ಈಗಾಗಲೇ ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿ ಘೋಷಿಸಿದ್ದು, ಈ ಬಗ್ಗೆ ಭಕ್ತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಅಲ್ಲಲ್ಲಿ ಕಸದ ತೊಟ್ಟಿಯನ್ನು ನಿರ್ಮಿಸಲಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಅಗತ್ಯ ಕ್ರಮವಹಿಸಲಾಗಿದೆ. ಹಾಗಾಗಿ, ಅಂಗಡಿ ತ್ಯಾಜ್ಯವನ್ನು ಭಕ್ತರು ಸಂಚರಿಸುವ ಮಾರ್ಗದಲ್ಲಿ ಬಿಸಾಡುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಅಶುಚಿತ್ವಕ್ಕೆ ಕಾರಣವಾಗಲಿದ್ದು, ಭಕ್ತರು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತ್ಯಾಜ್ಯವನ್ನು ಕಡ್ಡಾಯವಾಗಿ ಕಸದ ತೊಟ್ಟಿಯಲ್ಲಿ ಅಥವಾ ಇಲ್ಲಿಗೆ ಆಗಮಿಸುವ ಕಸ ವಿಲೇವಾರಿ ವಾಹನಕ್ಕೆ ಹಾಕಬೇಕು. ಈ ಮೂಲಕ ಸ್ವಚ್ಛತೆ ಕಾಪಾಡಬೇಕು. ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ತ್ಯಾಜ್ಯ ಬಿಸಾಡಬಾರದು ಎಂದು ತಿಳಿಸಿದರು.

ಬಳಿಕ ದಾಸೋಹ ಭವನಕ್ಕೆ ತೆರಳಿದ ಅವರು ಬೇಸಿಗೆ ಹಿನ್ನೆಲೆ ತಯಾರಿಸುತ್ತಿರುವ ಮೊಸರನ್ನದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಭವನದ ಮೇಲ್ವಿಚಾರಕರಿಗೆ ಸೂಚಿಸಿದರು. ಅಲ್ಲದೆ, ಭಕ್ತರ ಜತೆಗೂಡಿ ಊಟ ಸವಿಯುವುದರ ಮೂಲಕ ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು.

ಮೊಬೈಲ್ ಚಾರ್ಜರ್ ವ್ಯವಸ್ಥೆ:
ಮ.ಬೆಟ್ಟಕ್ಕೆ ಜಾತ್ರಾ ವೇಳೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬರುವ ಬಹುತೇಕ ಭಕ್ತರು ಮೊಬೈಲ್ ಹೊಂದಿರುತ್ತಾರೆ. ಆದರೆ ಕೆಲವರು ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಇಲ್ಲದ ಕಾರಣ ಮೊಬೈಲ್ ಸೆಂಟರ್ ಹಾಗೂ ಅಂಗಡಿಗಳಲ್ಲಿ 20 ರೂ.ನಿಂದ 50 ರೂ.ವರೆಗೆ ಹಣ ನೀಡಿ ಚಾರ್ಜ್ ಮಾಡಿಸಿಕೊಳ್ಳಬೇಕಿತ್ತು. ಇದರಿಂದ ಭಕ್ತರು ತೊಂದರೆಯನ್ನು ಅನುಭವಿಸುತ್ತಿದ್ದರು. ಇದನ್ನು ಮನಗಂಡ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಅವರು ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶನಿವಾರ ಸೇವಾ ಉತ್ಸವ ಟಿಕೆಟ್ ವಿತರಣಾ ಕೇಂದ್ರ, ವಾಣಿಜ್ಯ ಸಂಕೀರ್ಣ ಹಾಗೂ ಭಕ್ತರು ಹೆಚ್ಚು ಸಂದಣಿ ಇರುವ ಸ್ಥಳಗಳಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net