

ಹನೂರು: ತಾಲೂಕಿನ ಅಜ್ಜೀಪುರ ಭಾಗದ ರೈತರೊಬ್ಬರು ತರಕಾರಿ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಪಡೆಯುವುದರ ಮೂಲಕ ಈ ಭಾಗಕ್ಕೆ ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.
ಅಜ್ಜೀಪುರ ಸಮೀಪದ ಕಾಂಚಳ್ಳಿ ಗ್ರಾಮದ ದಿ. ಸಣ್ಣಪ್ಪಶೆಟ್ಟಿ ಮತ್ತು ಭಾಗ್ಯಮ್ಮ ದಂಪತಿ ಪುತ್ರ ಬಸವರಾಜು ಮಾದರಿ ರೈತ ಎನಿಸಿಕೊಂಡಿದ್ದಾರೆ. ಪಿಯುಸಿ ಶಿಕ್ಷಣಕ್ಕಷ್ಟೇ ತಮ್ಮ ವ್ಯಾಸಂಗ ಸೀಮಿತಗೊಳಿಸಿದ ಇವರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು. ತಂದೆ, ತಾಯಿಯ ಪ್ರೇರಣೆಯಿಂದ ಶಿಕ್ಷಣ ಹಂತದಲ್ಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. 2002ರಲ್ಲಿ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡರು. ಕೃಷಿಯಲ್ಲೇ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂಬ ದೃಢ ನಿರ್ಧಾರ ಹೊಂದಿದರು. ಬಳಿಕ ತಂದೆಯಿಂದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಇವರಿಗೆ ಆರಂಭದಲ್ಲಿ ಬೇಸಾಯ ತುಸು ಕಷ್ಟವೆನಿಸಿದರೂ ಕಾಲ ನಂತರದಲ್ಲಿ ಉತ್ತಮ ಅನುಭವ ಪಡೆದು ಇಷ್ಟವೆನಿಸಿತು. ಇದೀಗ ತರಕಾರಿ ಬೆಳೆಯುವುದರಲ್ಲಿ ಈ ಭಾಗದಲ್ಲಿ ಸೈ ಎನಿಸಿಕೊಂಡಿದ್ದು, ಉತ್ತಮ ಆದಾಯ ಗಳಿಸುವುದರ ಮೂಲಕ ನೆಮ್ಮದಿಯ ಜೀವನವನ್ನು ರೂಪಿಸಿಕೊಂಡಿದ್ದಾರೆ.
ಕುಟುಂಬಸ್ಥರ ಸಾಥ್:
ಸಂಪೂರ್ಣ ಕೃಷಿಯಲ್ಲಿ ತೊಡಗಿರುವ ಇವರಿಗೆ ಪತ್ನಿ ಭಾರ್ಗವಿ, ಸಹೋದರ ಪೆರುಮಾಳ್, ಪತ್ನಿ ಮಲ್ಲಿಗೆ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಒಟ್ಟಾರೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಇವರು ಸಂಪೂರ್ಣ ಕೃಷಿಯಲ್ಲಿ ತೊಡಗಿ ಶ್ರಮ ವಹಿಸಿ ದುಡಿದು ಉತ್ತಮ ಆದಾಯ ಗಳಿಸುವುದರ ಮೂಲಕ ನೆಮ್ಮದಿಯ ಬದುಕನ್ನು ರೂಪಿಸಿಕೊಂಡಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೀರಾವರಿಯಾಯ್ತು ಖುಷ್ಕಿ ಭೂಮಿ:
ಇವರಿಗೆ ಗ್ರಾಮ ಸಮೀಪದ ಉಡುತೊರೆ ಜಲಾಶಯದ ಬಳಿ 5 ಎಕರೆ ಜಮೀನಿದೆ. ಈ ಹಿಂದೆ ಖುಷ್ಕಿ ಭೂಮಿಯಾಗಿತ್ತು. ಮಳೆಯಾಶ್ರಿತ ಬೇಸಾಯದಲ್ಲಿ ರಾಗಿ ಹಾಗೂ ಕಡಲೆಕಾಯಿ ಮಾತ್ರ ಬೆಳೆಯುತ್ತಿದ್ದರು. ಇದರಿಂದ ನಷ್ಟವನ್ನು ಎದುರಿಸಿದರೂ ಛಲ ಬಿಡದ ಇವರು ಎರಡು ಕೊಳವೆ ಬಾವಿ ಕೊರೆಸಿ ಜಮೀನಿಗೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿದರು. ಈ ಮೂಲಕ ಖುಷ್ಕಿ ಭೂಮಿಯಾಗಿದ್ದ ಜಮೀನನ್ನು ನೀರಾವರಿ ಜಮೀನಾಗಿ ಪರಿವರ್ತಿಸಿದರು. ಬಳಿಕ ಕೆಂಪು ಮಣ್ಣಿನಿಂದ ಕೂಡಿರುವ ಈ ಪ್ರದೇಶದಲ್ಲಿ ಯಾರೂ ಸಹ ತರಕಾರಿಯನ್ನು ಬೆಳೆಯುತ್ತಿರಲಿಲ್ಲ. ಇದರಿಂದ ಜನರಿಗೆ ತರಕಾರಿಯ ಅಭಾವವಿತ್ತು. ಇದನ್ನು ಮನಗಂಡ ಬಸವರಾಜು ಈ ಭಾಗಕ್ಕೆ ತರಕಾರಿ ಒದಗಿಸಿ ಹೆಸರು ಗಳಿಸುವ ಸಲುವಾಗಿ ತರಕಾರಿ ಬೆಳೆಯನ್ನು ಬೆಳೆದರು. ಆರಂಭದಲ್ಲಿ ಕ್ಯಾರೆಟ್, ಬೀಟ್‌ರೂಟ್, ಆಲೂಗಡ್ಡೆ, ಬೆಳ್ಳುಳ್ಳಿ ಹಾಗೂ ಟೊಮ್ಯಾಟೊ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಪಡೆದರು. ಉತ್ತಮ ಆದಾಯವೂ ಬಂತು. ಇದರಿಂದ ಉತ್ಸಾಹಗೊಂಡ ಇವರು ಇನ್ನೂ 2 ಎಕರೆಯನ್ನು ಗುತ್ತಿಗೆ ಪಡೆದು ತರಕಾರಿ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಹಸಿರೆಲೆ ಹಾಗೂ ಮೇಕೆ ಗೊಬ್ಬರ ಬಳಕೆ:
ತರಕಾರಿ ಬೆಳೆಯಲ್ಲಿ ಉತ್ತಮ ಅನುಭವ ಹೊಂದಿರುವ ಇವರು ಹೆಚ್ಚಾಗಿ ಮೇಕೆ ಗೊಬ್ಬರವನ್ನು ಬಳಕೆ ಮಾಡುತ್ತಾರೆ. ಉತ್ತಮ ಇಳುವರಿಯನ್ನು ಪಡೆಯುವ ಸಲುವಾಗಿ ಹುರುಳಿ, ಅಲಸಂದೆ, ಸೆಣಬು, ಅವರೆಯನ್ನು ಮಿಶ್ರಣ ಮಾಡಿ ಜಮೀನಿನಲ್ಲಿ ಬಿತ್ತನೆ ಮಾಡಿ ಸುಮಾರು 35 ದಿನಕ್ಕೆ ಬೆಳೆದ ಸಸಿಯನ್ನು ಟ್ರಾೃಕ್ಟರ್ ಮೂಲಕ ಮಣ್ಣಿನಲ್ಲಿ ಮಿಶ್ರಣ ಮಾಡಿ ಹಸಿರೆಲೆ ಗೊಬ್ಬರವನ್ನು ಭೂಮಿಗೆ ನೀಡುತ್ತಾರೆ. ಜತೆಗೆ ಬೆಳೆಗಳಿಗೆ ಕ್ರಿಮಿಕೀಟಗಳ ಬಾಧೆ ತಗುಲದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಾರೆ.
ಬೆಳ್ಳುಳ್ಳಿ ಬಿತ್ತನೆಗೆ ಸಿದ್ಧತೆ:
ಕಳೆದ ತಿಂಗಳ ಹಿಂದೆ ಬೆಳ್ಳುಳ್ಳಿಗೆ ತೀವ್ರ ಬೇಡಿಕೆ ಹೆಚ್ಚಾಗಿದ್ದ ವೇಳೆ ಇವರು 2 ಎಕರೆಯಲ್ಲಿ ಬೆಳ್ಳುಳ್ಳಿ ಬೆಳೆದು ಉತ್ತಮ ಆದಾಯ ಗಳಿಸಿದ್ದಾರೆ. ಪ್ರಸ್ತುತ ಒಂದೂವರೆ ಎಕರೆಯಲ್ಲಿ ಈರುಳ್ಳಿ ಹಾಗೂ ಅರ್ಧ ಎಕರೆಯಲ್ಲಿ ಹಿತ್ತಲೆ ಅವರೆಯನ್ನು ಬೆಳೆದಿದ್ದಾರೆ. ಇದೀಗ ತಮಿಳುನಾಡಿನ ಊಟಿಯಿಂದ ಒಂದೂವರೆ ಲಕ್ಷ ರೂ. ವ್ಯಯಿಸಿ ಬೆಳ್ಳುಳ್ಳಿಯನ್ನು ಖರೀದಿಸಿದ್ದು, 3 ಎಕರೆಯಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಲು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕು ಎನ್ನುವ ಉದ್ದೇಶದಿಂದ ವಿವಿಧ ಬೆಳೆಗಳನ್ನು ಬೆಳೆಯಲು ಚಿಂತನೆ ನಡೆಸಿದ್ದಾರೆ. ಇವರು ಬೆಳೆದ ತರಕಾರಿಯನ್ನು ಸ್ಥಳೀಯವಾಗಿಯೇ ಮಾರಾಟ ಮಾಡುತ್ತಿರುವುದರಿಂದ ಸಾಗಣೆ ವೆಚ್ಚ ಇಲ್ಲದಂತಾಗಿದ್ದು, ಆದಾಯ ಗಳಿಕೆಗೆ ಉತ್ತಮವಾಗಿದೆ.
ಮೂರಿದ್ದ ಮೇಕೆ ನಲವತ್ತಾಯ್ತು:
ಕೃಷಿಯ ಜತೆಗೆ ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡಿರುವ ಇವರು ಆರಂಭದಲ್ಲಿ 3 ಮೇಕೆಗಳೊಂದಿಗೆ ಸಾಕಣೆ ಆರಂಭಿಸಿ, ಇದೀಗ 40 ಮೇಕೆಗಳನ್ನು ಹೊಂದಿದ್ದಾರೆ. ಈ ಮೂಲಕ ಉತ್ತಮ ಆದಾಯವೂ ಬರುತ್ತಿದೆ. ಜತೆಗೆ 3 ನಾಟಿ ಹಸುಗಳನ್ನು ಹೊಂದಿದ್ದು, ಇದರ ಹೆಚ್ಚಳಕ್ಕೆ ಚಿಂತನೆ ನಡೆಸಿದ್ದಾರೆ. ಹಾಗಾಗಿ ತರಕಾರಿ ಬೆಳೆಯಲ್ಲಿ ಸೈ ಎನಿಸಿಕೊಂಡ ಇವರು ಹೈನುಗಾರಿಕೆಯಲ್ಲೂ ಅಭಿವೃದ್ಧಿ ಹೊಂದಬೇಕು ಎಂಬ ದೃಢ ನಿರ್ಧಾರವನ್ನು ಹೊಂದಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೂ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಹಾಗಾಗಿ ನಾನು ವ್ಯವಸಾಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡೆ. ಕಳೆದ 20 ವರ್ಷದಿಂದ ಕೃಷಿ ಮಾಡುತ್ತಿದ್ದು, ತರಕಾರಿ ಬೆಳೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಿಂದ ಈ ಭಾಗಕ್ಕೆ ತರಕಾರಿ ಪೂರೈಸುತ್ತಿರುವುದು ಖುಷಿ ಕೊಟ್ಟಿದೆ. ಈ ಮೂಲಕ ಉತ್ತಮ ಆದಾಯ ಪಡೆಯುವುದರ ಮೂಲಕ ನೆಮ್ಮದಿಯ ಜೀವನ ರೂಪಿಸಿಕೊಂಡಿದ್ದೇನೆ.-ಬಸವರಾಜು, ರೈತ ಕಾಂಚಳ್ಳಿ.