ಶಾಸಕರ ‘ಬಲ’ ಕೌತುಕ ‘ಲ’

06rajesh2
Published on

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ತಮ್ಮ ಪಕ್ಷದ ಶಾಸಕರಿರುವುದು ಕಾಂಗ್ರೆಸ್‌ಗೆ ದೊಡ್ಡ ಬಲವಾಗಿದೆ. 1 ಕ್ಷೇತ್ರದಲ್ಲಿರುವ ಜೆಡಿಎಸ್ ಪಕ್ಷದ ಶಾಸಕರ ಬೆಂಬಲ ಪಡೆದಿರುವ ಬಿಜೆಪಿ ಈ ಹಿಂದಿನ ಚುನಾವಣೆಯೊಂದರಲ್ಲಿ 8 ಕ್ಷೇತ್ರಗಳಲ್ಲಿ ಎಂಎಲ್‌ಎಗಳಿದ್ದಾಗ ನಿರ್ಣಾಯಕ ಹೋರಾಟ ನಡೆಸಿತ್ತು. ಹೀಗಾಗಿ, ಶಾಸಕರ ಬಲಾಬಲದ ಲೆಕ್ಕಾಚಾರಕ್ಕೆ ಈ ಚುನಾವಣೆ ಸಿಲುಕದೆ ಕೌತುಕದಿಂದ ಕೂಡಿರುವ ಲಕ್ಷಣಗಳು ಗೋಚರಿಸುತ್ತಿವೆ.

ಈ ಕ್ಷೇತ್ರದ ವ್ಯಾಪ್ತಿಯಲ್ಲಿ ವರುಣ(ಮುಖ್ಯಮಂತ್ರಿ ಸಿದ್ದರಾಮಯ್ಯ), ಎಚ್.ಡಿ.ಕೋಟೆ(ಶಾಸಕ ಮತ್ತು ಜೆಎಲ್‌ಆರ್ ನಿಗಮದ ಅಧ್ಯಕ್ಷ ಅನಿಲ್ ಚಿಕ್ಕಮಾದು), ನಂಜನಗೂಡು(ಶಾಸಕ ದರ್ಶನ್ ಧ್ರುವನಾರಾಯಣ), ತಿ.ನರಸೀಪುರ(ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ), ಚಾಮರಾಜನಗರ (ಶಾಸಕ ಮತ್ತು ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ), ಕೊಳ್ಳೇಗಾಲ(ಶಾಸಕ-ಎ.ಆರ್.ಕೃಷ್ಣಮೂರ್ತಿ), ಗುಂಡ್ಲುಪೇಟೆ (ಶಾಸಕ-ಎಚ್.ಎಂ.ಗಣೇಶ್‌ಪ್ರಸಾದ್), ಹನೂರು(ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್) ವಿಧಾನಸಭೆಗಳಿವೆ. ಹನೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಶಾಸಕರೆಲ್ಲರೂ ತಮ್ಮ ಕ್ಷೇತ್ರಗಳಿಂದ ಲೀಡ್ ಕೊಡಿಸಲೇಬೇಕೆಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಸೂಚನೆ ನೀಡಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಿದ್ದರೂ 2009ರ ಲೋಕಸಭೆ ಚುನಾವಣೆ ಲಿತಾಂಶ ಶಾಸಕರ ಬಲಾಬಲದಾಚೆಗಿನ ಲೆಕ್ಕಾಚಾರದತ್ತ ದೃಷ್ಟಿ ಹರಿಸುವಂತೆ ಮಾಡಿದೆ. ಆಗ ಶಾಸಕರೇ ಇಲ್ಲದ ಸಂದರ್ಭದಲ್ಲಿ ಅಂದು ಬಿಜೆಪಿ ನಿರ್ಣಾಯಕ ಹೋರಾಟ ನಡೆಸಿತ್ತು.

ಕಡಿಮೆ ಮತಗಳ ಅಂತರ:
2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಟ್ಟು 8 ಕ್ಷೇತ್ರಗಳ ಶಾಸಕರ ಬಲವಿತ್ತು. ಬಿಜೆಪಿಯ ಒಬ್ಬ ಶಾಸಕನೂ ಇಲ್ಲದಿದ್ದ ಸಂದರ್ಭದಲ್ಲಿ ಗಣನೀಯ ಮತಗಳನ್ನು ಪಡೆದುಕೊಂಡು ಕಾಂಗ್ರೆಸ್‌ಗೆ ಭಾರಿ ಪೈಪೋಟಿ ನೀಡಿತ್ತು. ಈ ಚುನಾವಣೆಗೂ ಮೊದಲು 2008ರಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಆಗ ವರುಣದಲ್ಲಿ (ಸಿದ್ದರಾಮಯ್ಯ), ಎಚ್.ಡಿ.ಕೋಟೆ (ಚಿಕ್ಕಣ್ಣ), ನಂಜನಗೂಡು (ವಿ.ಶ್ರೀನಿವಾಸಪ್ರಸಾದ್), ತಿ.ನರಸೀಪುರ (ಡಾ.ಎಚ್.ಸಿ.ಮಹದೇವಪ್ಪ), ಚಾಮರಾಜನಗರ (ಸಿ.ಪುಟ್ಟರಂಗಶೆಟ್ಟಿ), ಕೊಳ್ಳೇಗಾಲ(ಆರ್.ಧ್ರುವನಾರಾಯಣ), ಗುಂಡ್ಲುಪೇಟೆ (ಎಚ್.ಎಸ್.ಮಹದೇವಪ್ರಸಾದ್), ಹನೂರು (ಆರ್.ನರೇಂದ್ರ) ಕಾಂಗ್ರೆಸ್ ಗೆದ್ದಿತ್ತು. ಲೋಕಸಭೆ ವ್ಯಾಪ್ತಿಯ ಒಟ್ಟು 8 ಕ್ಷೇತ್ರಗಳ ಪೈಕಿ 8 ಕೈವಶವಾಗಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು.
ಬಳಿಕ 2009ರಲ್ಲಿ ಬಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಕೊಳ್ಳೇಗಾಲ ಶಾಸಕರಾಗಿದ್ದ ಆರ್.ಧ್ರುವನಾರಾಯಣ ಅವರನ್ನು ಕಣಕ್ಕಿಳಿಸಲಾಯಿತು. ಜೆಡಿಎಸ್ ತೊರೆದು ಪಕ್ಷ ಸೇರ್ಪಡೆಗೊಂಡ ಎ.ಆರ್.ಕೃಷ್ಣಮೂರ್ತಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 8 ಶಾಸಕರ ಬಲದೊಂದಿಗೆ ಹೋರಾಟ ನಡೆಸಿತು. ಆರ್.ಧ್ರುವನಾರಾಯಣ 3,69,970 ಮತಗಳನ್ನು ಪಡೆದುಕೊಂಡರು. ಬಿಜೆಪಿಗೆ ಒಬ್ಬ ಶಾಸಕನೂ ಇರಲಿಲ್ಲ. ಎ.ಆರ್.ಕೃಷ್ಣಮೂರ್ತಿ 3,65,958 ಮತಗಳನ್ನು ಗಳಿಸಿದರು. 4002 ಮತಗಳ ಅಂತರದಿಂದ ಸೋತರು.

‘ಲೀಡ್’ ಲೆಕ್ಕಾಚಾರ:
ಸಿಎಂ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ವರುಣದಲ್ಲಿ ಕಾಂಗ್ರೆಸ್‌ಗೆ 60 ಸಾವಿರ ಮತಗಳ ಲೀಡ್ ಕೊಡಿ ಎಂದು ಕೇಳಿದ್ದಾರೆ. ಇದೇ ರೀತಿ ಕಾಂಗ್ರೆಸ್ ಶಾಸಕರು ಇರುವ ಕಡೆಗಳಲ್ಲೂ ಲೀಡ್ ಕೇಳಿದ್ದಾರೆ. ಪಕ್ಷ ಅಧಿಕಾರ ಕಳೆದುಕೊಂಡಿರುವ ಹನೂರಿನಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಲೀಡ್ ಕೊಡಿಸಲು ಶ್ರಮಿಸಲಿದ್ದಾರೆ. ಇವರೆಲ್ಲರ ಲೀಡ್ ಗುರಿಯನ್ನು ಲೆಕ್ಕ ಹಾಕಿ ಅಭ್ಯರ್ಥಿ ಸುನೀಲ್ ಬೋಸ್ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಮತದಾನಕ್ಕೂ ಮುನ್ನವೇ ಸಿಎಂ ಸಿದ್ದರಾಮಯ್ಯ ೋಷಣೆ ಮಾಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ ಕ್ಷೇತ್ರಗಳಲ್ಲಿ ಮಾತ್ರ ಲೀಡ್ ಗಳಿಸಿದ್ದರೂ ಅಧಿಕ ಮತ ಗಳಿಸಿದ ಹಿನ್ನೆಲೆಯಲ್ಲಿ ಗೆಲುವು ಸಾಧಿಸಿದರು. ಆರ್.ಧ್ರುವನಾರಾಯಣ ಎಚ್.ಡಿ.ಕೋಟೆ, ವರುಣ, ತಿ.ನರಸೀಪುರ, ಕೊಳ್ಳೇಗಾಲ, ಹನೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೂ ಕಡಿಮೆ ಲೀಡ್ ಸಿಕ್ಕಿತು. ವಿ.ಶ್ರೀನಿವಾಸಪ್ರಸಾದ್ 5,68,537 ಮತಗಳು, ಆರ್.ಧ್ರುವನಾರಾಯಣ 5,66,720 ಮತಗಳನ್ನು ಪಡೆದುಕೊಂಡಿದ್ದರು. 1817 ಮತಗಳ ಅಂತರದಲ್ಲಿ ವಿ.ಶ್ರೀನಿವಾಸಪ್ರಸಾದ್ ಗೆದ್ದರು. ಈ ಸಲ ಬಿಜೆಪಿಗೆ ಶಾಸಕರ ಬಲವಿಲ್ಲದಿದ್ದರೂ ಮೋದಿ ಅಲೆ ಬೆಂಬಲವಾಗಿ ನಿಲ್ಲುವ ಆತ್ಮವಿಶ್ವಾಸವಿದೆ. 2009ರ ಲೋಕಸಭೆಯ ಚೈತನ್ಯ ವೃದ್ಧಿಯಾಗುವ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ‘ತಮ್ಮ ಅಭ್ಯರ್ಥಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂದಿದ್ದಾರೆ.

ಇಬ್ಬರಿಗೂ ಮೊದಲ ‘ಲೋಕ’
ಲೋಕಸಭೆ ಚುನಾವಣೆಯಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆ ಇರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಇದು ಮೊದಲ ಲೋಕಸಭೆ ಚುನಾವಣೆಯಾಗಿದೆ.ಸುನೀಲ್ ಬೋಸ್ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಸತತ ಪ್ರಯತ್ನ ಮಾಡಿದ್ದರು. ಆದರೆ ಪಕ್ಷದಿಂದ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬೇಸರಗೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಎಸ್.ಬಾಲರಾಜ್ 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೊಳ್ಳೇಗಾಲ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದಿದ್ದರು. ಇದೀಗ ಇಬ್ಬರೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net