

ಹನೂರು: ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಉತ್ಸವ ಮೂರ್ತಿಯ ತೆಪ್ಪೋತ್ಸವ ಹಾಗೂ ಉಯ್ಯಲೋತ್ಸವವು ಶುಕ್ರವಾರ ರಾತ್ರಿ ಸಮೀಪದ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿತು.
ಆರ್.ಎಸ್.ದೊಡ್ಡಿ ಗ್ರಾಮ ಹನೂರಿನಲ್ಲಿ ನೆಲೆಯೂರಿರುವ ಶ್ರೀ ಬೆಟ್ಟಳ್ಳಿ ಮಾರಮ್ಮನ ತವರು ಮನೆ. ಹಾಗಾಗಿ ಪ್ರತಿ ವರ್ಷ ನಡೆಯುವ ಬೆಟ್ಟಳ್ಳಿ ಮಾರಮ್ಮ ಜಾತ್ರೆಯ ಮುಕ್ತಾಯದ ಮಾರನೇ ದಿನ ಗ್ರಾಮದಲ್ಲಿ ತೆಪ್ಪೋತ್ಸವವು ಹಾಗೂ ಉಯ್ಯಲೋತ್ಸವವು ನಡೆಯುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಆರ್.ಎಸ್.ದೊಡ್ಡಿ ಗ್ರಾಮಸ್ಥರು ಉತ್ಸವ ಮೂರ್ತಿಯನ್ನು ಕರೆತರುವ ನಿಟ್ಟಿನಲ್ಲಿ ಪಟ್ಟಣದ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ಸತ್ತಿಗೆ, ಸೂರಿಪಾನಿ ಹಾಗೂ ಮಂಗಳ ವಾದ್ಯಮೇಳದೊಂದಿಗೆ ಕುದುರೆ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆತಂದು ರಾತ್ರಿ 9.30ರಲ್ಲಿ ಗ್ರಾಮಸ್ಥರು ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಗ್ರಾಮದ ಮಹದೇಶ್ವರಸ್ವಾಮಿ ದೇಗುಲದ ಸಮೀಪದಲ್ಲಿರುವ ಕೆರೆಯ ಬಳಿ ಉತ್ಸವಮೂರ್ತಿಯನ್ನು ಕೊಂಡೊಯ್ದು ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದ ತೆಪ್ಪದಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ನೆರೆದಿದ್ದ ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ದೇವಿಗೆ ಜಯಘೋಷ ಮೊಳಗಿಸಿದರು. ಈ ವೇಳೆ ದೇಗುಲದ ಅರ್ಚಕ ಜಯಂತ್‌ರಾವ್ ಶಿಂಧೆ ಇದ್ದರು.
ಉಯ್ಯಲೋತ್ಸವ:
ಗ್ರಾಮದ ಕೆರೆಯ ಏರಿಯ ಬಳಿ ಹಸಿರು ಸೊಪ್ಪಿನಿಂದ ನಿರ್ಮಿಸಿದ್ದ ಚಪ್ಪರದ ಉಯ್ಯಲೆಯಲ್ಲಿ ದೇವಿಯ ಉತ್ಸವಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಗ್ರಾಮಸ್ಥರ ಸಮ್ಮುಖದಲ್ಲಿ ಉಯ್ಯಲೋತ್ಸವ ನೆರವೇರಿಸಲಾಯಿತು. ಈ ವೇಳೆ ಗ್ರಾಮದ ಮಹಿಳೆಯರು ದೇವಿಗೆ ತಂಪುಜ್ಯೋತಿ (ತಂಬಿಟ್ಟು) ಅರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ರಾತ್ರಿ 12.30ರ ನಂತರ ಉತ್ಸವ ಮೂರ್ತಿಯನ್ನು ನಿಂಬೆಹಣ್ಣು ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಿ ಸತ್ತಿಗೆ, ಸೂರಿಪಾನಿ ಹಾಗೂ ಮಂಗಳ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಅಲ್ಲದೆ ಪ್ರತಿ ಮನೆಯ ಮುಂದೆಯೂ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ ಪ್ರಾರಂಭವಾದ ಮನೆಮನೆಯ ಪೂಜೆಯು ಶನಿವಾರ ಮಧ್ಯಾಹ್ನ 12ಗಂಟೆಯ ತನಕವೂ ನಡೆಯಿತು. ನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಪಟ್ಟಣದ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಕೊಂಡೊಯ್ದು ಮೂಲ ಸ್ಥಾನದಲ್ಲಿ ಇರಿಸಲಾಯಿತು.