ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಅವರಿಂದ ಮತಯಾಚನೆ

04rajesh1
Published on

ಚಾಮರಾಜನಗರ : ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಗುರುವಾರ ವಿವಿಧ ಕಾಲೇಜು ಹಾಗೂ ವಕೀಲರ ಸಂಘಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದರು.

ನಗರದ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿಗೆ ಗುರುವಾರ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ವಕೀಲರಲ್ಲಿ ಮನವಿ ಮಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ನಂಜಯ್ಯ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸೇವೆಯನ್ನು ನೋಡಿ ಬಿಜೆಪಿಯನ್ನು ಬೆಂಬಲಿಸುತ್ತೇವೆ. ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಗೆಲ್ಲುವ ವಿಶ್ವಾಸವಿದೆ. ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ವಕೀಲರ ಸಂಘಕ್ಕೆ ಆಗಬೇಕಿರುವ ಕೆಲಸಗಳನ್ನು ಮಾಡಿಕೊಡಬೇಕು ಎಂದರು.

ಎಸ್.ಬಾಲರಾಜ್ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಕೀಲರು ಒಗ್ಗಟ್ಟಿನಿಂದ ಬೆಂಬಲಿಸಿ ಗೆಲ್ಲಿಸಿದರೆ ವಕೀಲರ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ವಕೀಲರ ಸಂಘದ ವತಿಯಿಂದ ಬಾಲರಾಜ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಸಿ.ಸಿ.ರಮೇಶ್, ಕಾರ್ಯದರ್ಶಿಗಳಾದ ಯೋಗೇಶ್, ಮೋಹನ್, ಜಗದೀಶ್, ರಾಜ್ಯ ಪ್ರಕೋಷ್ಠ ಸಹ ಸಂಚಾಲಕ ಪ್ರಸಾದ್ ಇತರರು ಭಾಗವಹಿಸಿದ್ದರು.

ವಿವಿಧ ಕಾಲೇಜುಗಳಿಗೆ ಭೇಟಿ:
ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಅವರು ನಗರದ ವಿವಿಧ ಕಾಲೇಜಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ನಗರದ ಸೇವಾಭಾರತಿ ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಬಳಿ ಮತಯಾಚನೆ ಮಾಡಿದರು. ನಂತರ ನಗರದ ಹೊರವಲಯದಲ್ಲಿರುವ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಮತಯಾಚಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ಮುಖಂಡ ಆರ್.ಸುಂದರ್, ನಗರಸಭಾ ಸದಸ್ಯ ಶಿವರಾಜ್, ನಟರಾಜ್ ಹಾಗೂ ಇತರರು ಅಭ್ಯರ್ಥಿ ಬಾಲರಾಜ್ ಅವರಿಗೆ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net