

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಗ್ನಿಕುಂಡ ದರ್ಶನ ವಿಜೃಂಭಣೆಯಿಂದ ಜರುಗಿತು. ಈ ಮೂಲಕ 4 ದಿನಗಳ ಜಾತ್ರೆ ಮುಕ್ತಾಯಗೊಂಡಿತು.
ಅಗ್ನಿಕುಂಡ ದರ್ಶನ ಹಿನ್ನೆಲೆಯಲ್ಲಿ ದೇಗುಲದಲ್ಲಿ ಮುಂಜಾನೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಅಗ್ನಿಕುಂಡ ದರ್ಶನಕ್ಕೆ ಒಂದು ವಾರದಿಂದ ಅಗ್ನಿ ಕುಂಡವನ್ನು ದೇಗುಲದ ಮುಂಭಾಗದಲ್ಲಿ 3 ಕವಡಿನ ಕಂಬದಲ್ಲಿ ಇರಿಸಲಾಗಿತ್ತು. ಈ ಕುಂಡಕ್ಕೆ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಬೆಳಗ್ಗೆ 5 ಗಂಟೆಯಿಂದ 6ರವರೆಗೆ ಅರ್ಚಕರು ಅಗ್ನಿಕುಂಡಕ್ಕೆ ವಿಶೇಷ ಪೂಜೆ ಹಾಗೂ ಧೂಪ, ದೀಪದಾರತಿ ಬೆಳಗಿಸಿದರು. ಬಳಿಕ ದೇಗುಲದ ಪ್ರಧಾನ ಅರ್ಚಕ ರಾಜೋಜಿರಾವ್ ಸಿಂಧೆ ಭಕ್ತರೊಂದಿಗೆ ಮಂಗಳವಾದ್ಯದ ಸಮೇತ ಸಮೀಪದ ತಟ್ಟೆಹಳ್ಳದ ಬಳಿಯ ಅರಳಿಮರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರು ಮೆರವಣಿಗೆ ಮೂಲಕ ದೇಗುಲಕ್ಕೆ ಆಗಮಿಸುವ ವೇಳೆ ದಾರಿಯುದ್ದಕ್ಕೂ ನೂರಾರು ಭಕ್ತರು ದಾಟಿಸಿಕೊಂಡು ದೇವಿಕೃಪೆಗೆ ಪಾತ್ರರಾದರು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಅರ್ಚಕರು ಅಗ್ನಿಕುಂಡವನ್ನು ಎತ್ತಿ ಪ್ರದರ್ಶಿಸುವುದರ ಮೂಲಕ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದರು. ಈ ವೇಳೆ ಭಕ್ತರು ಜಯಘೋಷಗಳನ್ನು ಮೊಳಗಿಸಿದರು. ಅಗ್ನಿಕುಂಡವನ್ನು ದೇವಸ್ಥಾನದ ಗುಡಿಯೊಳಗೆ ಕೊಂಡೊಯ್ದು ಅರ್ಚಕರು ತೊಡೆಯ ಮೇಲೆ ಇಟ್ಟುಕೊಂಡು ಮಳೆ-ಬೆಳೆಯ ಬಗ್ಗೆ ಮುನ್ಸೂಚನೆ ನೀಡಿದರು. ಹನೂರು, ಬೆಂಗಳೂರು, ಮೈಸೂರು, ಮಂಡ್ಯ, ಕೊಳ್ಳೇಗಾಲ, ರಾಮಾಪುರ, ಲೊಕ್ಕನಹಳ್ಳಿ ಇನ್ನಿತರ ಕಡೆಗಳಿಂದ ಆಗಮಿಸಿದ್ದ ಭಕ್ತರು ಅಗ್ನಿಕುಂಡ ಎತ್ತುವುದನ್ನು ಕಣ್ತುಂಬಿಕೊಂಡರು. ಬಳಿಕ ದೇಗುಲದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ಮಿಕುಂಡದ ಕಂಬವನ್ನು ತೆರೆವುಗೊಳಿಸಲಾಯಿತು. ಭಕ್ತರು ಹರಕೆ ತೀರಿಸಿ ಕಾಣಿಕೆ ಸಲ್ಲಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಅಗ್ನಿಕುಂಡ ದರ್ಶನಕ್ಕೂ ಮುನ್ನ ಬೆಳಗಿನ ಜಾವ 3 ಗಂಟೆಯಿಂದಲೇ ದೇಗುಲದ ಮುಂಭಾಗದಲ್ಲಿ ಮಾರಿ ಕುಣಿತ ಆರಂಭವಾಯಿತು. ಈ ವೇಳೆ ಯುವಕರು ಸೇರಿದಂತೆ ಭಕ್ತರು ಕುಣಿದು ಸಂಭ್ರಮಿಸಿದರು.