

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮಾತನಾಡಿದ ಅವರು, ಲೋಕಸಭೆ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಕಡೆ ನಮ್ಮ ಶಾಸಕರಿದ್ದಾರೆ. ಹನೂರಿನಲ್ಲಿ ಸ್ವಲ್ಪ ಅಂತರದಲ್ಲಿ ಸೋತೆವು. ಮಾಜಿ ಶಾಸಕ ಆರ್.ನರೇಂದ್ರ ಈ ಚುನಾವಣೆಯಲ್ಲಿ ಬಹುಮತ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ಸುನೀಲ್ ಬೋಸ್ 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಈ ಮೂಲಕ ರಾಜಕಾರಣ ಶುರು ಮಾಡಲಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದರು.
ಮಾಜಿ ಸಂಸದ ದಿ.ಧ್ರುವನಾರಾಯಣ್ ಇದ್ದಾಗ ನಾನು ಈ ಹುರುಪನ್ನು ಕಂಡಿದ್ದೆ. ಅವರು ಎರಡು ಬಾರಿ ಗೆದ್ದರು. ಮೂರನೇ ಸಲ ಸೋತರೂ ಮನೆಯಲ್ಲಿ ಕೂರಲಿಲ್ಲ. ಪಕ್ಷದ ಕಾರ್ಯಾಧ್ಯಕ್ಷರಾದರು. ಅವರ ದಾರಿಯಲ್ಲಿ ಸುನೀಲ್ ಬೋಸ್ ನಡೆಯಬೇಕೆಂಬುದು ನನ್ನ ಇಚ್ಛೆ. ಧ್ರುವ ನಂ.1 ಸಂಸದರಾದ ರೀತಿಯಲ್ಲೇ ಸುನೀಲ್ ಬೋಸ್ ಆಗಬೇಕು ಎಂದರು.
ಗೃಹ ಸಚಿವ ಅಮಿತ್ ಷಾ ಚನ್ನಪಟ್ಟಣಕ್ಕೆ ಬಂದು ದೊಡ್ಡ ಸುಳ್ಳು ಹೇಳಿ ಹೋಗಿದ್ದಾರೆ. ಬರ ಪರಿಹಾರಕ್ಕಾಗಿ ಮೂರು ತಿಂಗಳ ಹಿಂದೆ ಮನವಿ ಮಾಡಿದ್ದಾರೆ ಎಂದಿದ್ದಾರೆ. ಆದರೆ, ನಾವು ಸೆ.23ರಂದೇ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೇವೆ. ಮನವಿ ಸಲ್ಲಿಸಿ ಐದು ತಿಂಗಳು ಕಳೆದಿದ್ದರೂ ಅವತ್ತಿಂದ ಇವತ್ತಿನವರೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರವನ್ನು ನೀಡಲ್ಲ ಎಂದು ಆರೋಪಿಸಿದರು.
ಈ ಹಿಂದೆ ನಾನು ಸಿಎಂ ಆಗಿದ್ದಾಗ ಎಲ್ಲ ಭರವಸೆ ಈಡೇರಿಸಿದ್ದೆ. ಈಗ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇನೆ. ಪ್ರಧಾನ ಮಂತ್ರಿ ಮೋದಿ ಕೊಟ್ಟ ಭರವಸೆಗಳನ್ನು ಈಡೇರಿಸದೆ ಜನರಿಗೆ ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ಅಚ್ಛೇ ದಿನ ಬರಲಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಾಗಿದೆ. ಇಂತಹವರಿಗೆ ಮತ ಹಾಕಬೇಕಾ? ಈ ವೈಫಲ್ಯಗಳನ್ನು ಮನೆ ಮನೆಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್‌ಪ್ರಸಾದ್, ದರ್ಶನ್ ಧ್ರುವನಾರಾಯಣ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಆರ್.ನರೇಂದ್ರ ಮತ್ತು ಇತರರು ಭಾಗವಹಿಸಿದ್ದರು.
ಸಂಸದರ ಬೆಂಬಲ:
ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸುನೀಲ್‌ಬೋಸ್‌ಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಬೆಂಬಲ ನೀಡಿ ಕಳುಹಿಸಿಕೊಟ್ಟಿದ್ದಾರೆ. ಅವರ ಬೆಂಬಲಿಗರ ಸಹಕಾರ ಕೊಟ್ಟು ಕಳುಹಿಸಿಕೊಟ್ಟಿದ್ದಾರೆ. ನಾವೆಲ್ಲ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಗೆಲ್ಲಿಸಿ ಎರಡನೇ ಅಂಬೇಡ್ಕರ್ ಮಾಡಬೇಕೆಂದು ಕೊಂಡಿದ್ದೆವು ಆಗಲಿಲ್ಲ. ಈಗ ಅವರ ಮಗ ಸುನೀಲ್ ಬೋಸ್ ಅನ್ನು ಅಧಿಕ ಮತಗಳನ್ನು ನೀಡಿ ಗೆಲ್ಲಿಸಬೇಕು. ಜಿಲ್ಲೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟಾಗ ಬಿಜೆಪಿಯವರು ಬರಲಿಲ್ಲ. ಯಾರಾದರೂ ಸಹಾಯ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ಸುನೀಲ್‌ಬೋಸ್ ನಾಮಪತ್ರ ಸಲ್ಲಿಕೆ:
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ಡಿಸಿ ಶಿಲ್ಪಾನಾಗ್‌ಗೆ ಅಭ್ಯರ್ಥಿ ಸುನೀಲ್‌ಬೋಸ್ ನಾಮಪತ್ರ ಸಲ್ಲಿಸಿದರು. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ವೆಂಕಟೇಶ್, ಶಾಸಕ ಮತ್ತು ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದರು. ಇದಕ್ಕೂ ಮುನ್ನ ಸುನೀಲ್ ಬೋಸ್ ನಗರದ ಶ್ರೀಚಾಮರಾಜೇಶ್ವರ ದೇಗುಲ, ಕೊಳದ ಗಣಪತಿ, ಮಾರಮ್ಮನ ದೇವಸ್ಥಾನ, ಆಂಜನೇಯಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಧ್ರುವನಾರಾಯಣ್ ರೀತಿ ಕೆಲಸ ಮಾಡಲು ನಮ್ಮ ಯುವ ನಾಯಕ ಸುನೀಲ್ ಬೋಸ್ ಇದ್ದಾರೆ. ಬಿಜೆಪಿ ಸಂವಿಧಾನದ ಬದಲಾಯಿಸಲು ಪ್ರಯತ್ನಿಸುತ್ತಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಆದರೆ ಇದು ಸಾಧ್ಯವಿಲ್ಲ.ಜಿ.ಪರಮೇಶ್ವರ್, ಗೃಹ ಸಚಿವ
ರೋಡ್ ಶೋ:
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು. ಬಿ.ರಾಚಯ್ಯ ಜೋಡಿ ರಸ್ತೆಯುದ್ದಕ್ಕೂ ಜನರು ತುಂಬಿದ್ದರು. ವೃತ್ತದಲ್ಲಿ ನಿಂತಿದ್ದ ತೆರೆದ ವಾಹನವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಹತ್ತಿ ಹಳೇ ಜಿಲ್ಲಾಸ್ಪತ್ರೆವರೆಗೂ ಆಗಮಿಸಿ ಭಾಷಣ ಮಾಡಿ ಹೊರಟರು. ಈ ಸಂದರ್ಭದಲ್ಲಿ ನೆಚ್ಚಿನ ನಾಯಕರಿಗೆ ಕಾರ್ಯಕರ್ತರು ಜೈಕಾರ ಹಾಕಿದರು. ಉರಿ ಬಿಸಿಲನ್ನೂ ಲೆಕ್ಕಿಸದೆ ಜನರು ಸೇರಿದ್ದರು.