ಚುನಾವಣಾಧಿಕಾರಿಗೆ ಎನ್.ಮಹೇಶ್ ದೂರು

01rajesh3
Published on

ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದ್ದಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್‌ಗೆ ದೂರು ಕೊಟ್ಟಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ದೂರು ನೀಡಿದ ಎನ್.ಮಹೇಶ್ ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚವಿ ಕೆ.ವೆಂಕಟೇಶ್ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ದೂರು ನೀಡಿದ್ದಾರೆ.

ಮಾ.28ರಂದು ಕೊಳ್ಳೇಗಾಲದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗೆ ಏನು ಮಾಡಿಲ್ಲ ಎನ್ನುತ್ತಿದ್ದಾರೆ, ಎನ್.ಮಹೇಶ್ ಅವರು ಶಿಕ್ಷಣ ಸಚಿವರಾಗಿದ್ದ ವೇಳೆ ಶೂ, ಸಾಕ್ಸ್‌ನಲ್ಲಿ 30 ಕೋಟಿ ರೂ. ಲೂಟಿ ಹೊಡೆದಿದ್ದಾರೆ. ಅವರಿಂದ ನಾವೇನೂ ಕಲಿಯಬೇಕಿಲ್ಲ ಎಂದಿದ್ದರು. ಕಾರ್ಯಕ್ರಮದಲ್ಲಿ ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹಾದೇವಪ್ಪ ಕೂಡ ಇದ್ದರು. ಭ್ರಷ್ಟಾಚಾರ ಆರೋಪ ಮಾಡಿದ ಹಿನ್ನೆಲೆ ಡಿಸಿ ಶಿಲ್ಪಾನಾಗ್ ಅವರಿಗೆ ಮಹೇಶ್ ದೂರು ಕೊಟ್ಟು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net