

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ರೋಟರಿ ಸಂಸ್ಥೆ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಮತದಾನ ಜಾಗೃತಿಗಾಗಿ ಸೋಮವಾರ ಏರ್ಪಡಿಸಲಾಗಿದ್ದ ಬೀದಿನಾಟಕ ಎಲ್ಲರ ಗಮನ ಸೆಳೆಯಿತು.
ಬೀದಿ ನಾಟಕವನ್ನು ವೀಕ್ಷಿಸಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಈ ಬಾರಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ರೋಟರಿ ಸಂಸ್ಥೆ-3181ರ ವತಿಯಿಂದ ನಾಲ್ಕು ಜಿಲ್ಲೆಗಳಲ್ಲಿ ಮತದಾನ ಜಾಗೃತಿಗಾಗಿ ಬೀದಿನಾಟಕ ಹಮ್ಮಿಕೊಳ್ಳಲಾಗಿದ್ದು, ಬೀದಿನಾಟಕ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಅರ್ಥಪೂರ್ಣ, ಕ್ರಿಯಾಶೀಲ ಕಾರ್ಯಕ್ರಮವಾಗಿದೆ ಎಂದರು.
ಈ ಬಾರಿ ಮತದಾನಕ್ಕಾಗಿ ನೋಂದಾಯಿಸಿರುವ 18 ವರ್ಷ ತುಂಬಿದ ಯುವಜನರು, ಹಿರಿಯ ನಾಗರಿಕರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರೂ ತಪ್ಪದೆ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತವು ಸಹ ಅನೇಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡುತ್ತಿದೆ. ಜಿಲ್ಲಾ ಸ್ವೀಪ್ ಸಮಿತಿಯು ಸಹ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಉಸ್ತುವಾರಿ ವಿಶ್ವ ಶೆಣೈ, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ರೋಟರಿ ಸಂಸ್ಥೆಯ ಕಿರಣ್ ರಾಬರ್ಟ್, ಅಧಿಕಾರಿಗಳು, ಇತರರು ಇದ್ದರು.