ಸಾವಯವ ಕೃಷಿಯಲ್ಲಿ ‘ಅಣ್ತಮ್ಮ’ರ ಸಾಧನೆ

30-KGLPHOTO-2
Published on

ಕೊಳ್ಳೇಗಾಲ: ತಾಲೂಕಿನ ಬೂದಿತಿಟ್ಟು ಗ್ರಾಮದ ಸಹೋದರರಿಬ್ಬರು ರಾಸಾಯನಿಕ ಮುಕ್ತ ವ್ಯವಸಾಯ ಆರಂಭಿಸಿದ್ದು, ಪ್ರಾಯೋಗಿಕವಾಗಿ 4 ಎಕರೆಯಲ್ಲಿ ಸಾವಯವ ಪದ್ಧತಿಯಲ್ಲಿ ಬಾಳೆ ಬೆಳೆದು ಯಶಸ್ಸು ಕಂಡಿದ್ದಾರೆ.

ಗ್ರಾಮದ ಕೆಂಪಪ್ಪ ಮತ್ತು ಮಹದೇವಮ್ಮ ಅವರ ಪುತ್ರರಾದ ಪ್ರಭುಸ್ವಾಮಿ ಹಾಗೂ ಮಹದೇವಸ್ವಾಮಿ ಅವರೇ ಸಾವಯವ ಕೃಷಿಯತ್ತ ಮುಖ ಮಾಡಿರುವವರು. ಈ ಕುಟುಂಬ ಮೂಲತಃ ರೈತಾಪಿ ಕುಟುಂಬವಾಗಿದ್ದು ವ್ಯವಸಾಯ ವೃತ್ತಿ ಬಿಟ್ಟರೆ ಬೇರೇನು ತಿಳಿದಿಲ್ಲ. ಸ್ವಂತ 4 ಎಕರೆಯಲ್ಲಿ ಕೃಷಿ ಮಾಡುತ್ತಿದ್ದ ಈ ಸಹೋದರರು ನಂತರ 12.5 ಎಕರೆ ಭೂಮಿಯನ್ನು ಖರೀದಿ ಮಾಡಿರುವುದಲ್ಲದೆ, 16.5 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಒಟ್ಟು 33 ಎಕರೆ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಕೂಲಿ, ಕೃಷಿ ಪರಿಕರ ಇನ್ನಿತರ ವೆಚ್ಚ ಕಳೆದು ವರ್ಷಕ್ಕೆ 20 ಲಕ್ಷ ರೂ. ಲಾಭ ಗಳಿಸುತ್ತ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.

ಮೊದಲಿನಿಂದಲೂ ಸಂಪೂರ್ಣ ರಾಸಾಯನಿಕ ಪದ್ಧತಿಯಲ್ಲಿ ಕೃಷಿ ಅಳವಡಿಸಿಕೊಂಡಿದ್ದ ಈ ಅಣ್ತಮ್ಮ ಯುಟ್ಯೂಬ್ ಇನ್ನಿತರ ಮಾಧ್ಯಮಗಳಲ್ಲಿ ಸಾವಯವ ಕೃಷಿಕರು ಮಾಡುತ್ತಿರುವ ಸಾಧನೆಗಳಿಂದ ಪ್ರೇರಣೆಗೊಂಡು ಹಂತ ಹಂತವಾಗಿ ರಾಸಾಯನಿಕ ಕೃಷಿ ಪದ್ಧತಿಗೆ ವಿದಾಯ ಹೇಳೋಣ ಎಂದು ನಿರ್ಧರಿಸಿ ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ.

ಸಾವಯವ ಬಾಳೆೆ: ಸಾವಯವ ಕೃಷಿ ಪದ್ಧತಿಯಲ್ಲಿ ಆರಂಭ ಈ ಒಡಹುಟ್ಟಿದವರಿಗೆ ಖುಷಿ ತಂದಿದೆ. 4 ಎಕರೆಯಲ್ಲಿ ಪ್ರಾಯೋಗಿಕವಾಗಿ ಸಾವಯವ ಮಾದರಿಯಲ್ಲಿ ಬಾಳೆ ಹಾಕಿದ್ದಾರೆ. ಈ ಪೈಕಿ ಎರಡು ಎಕರೆಯಲ್ಲಿ 2 ತಿಂಗಳ ಪಚ್ಚಬಾಳೆಯಿದ್ದು, ಇನ್ನೆರಡು ಎಕರೆಯಲ್ಲಿ 5 ತಿಂಗಳ ಎಲಕ್ಕಿ ಬಾಳೆ ಕಂಗೊಳಿಸುತ್ತಿದೆ. 8 ರಿಂದ 10 ಅಡಿ ಎತ್ತರಕ್ಕೆ ಸೊಂಪಾಗಿ ಬೆಳೆದು ನಿಂತಿದೆ. ಇದು ನೋಡುಗರ ಹುಬ್ಬೇರಿಸುವಂತೆ ಮಾಡಿದ್ದು, ಅಕ್ಕಪಕ್ಕದ ಜಮೀನಿನವರು ಈ ಸಹೋದರರು ಬಾಳೆ ಬೆಳೆದಿರುವ ಬಗ್ಗೆ ಮಾಹಿತಿ ಪಡೆದುಕೊಂಡು ನಾವು ಸಾವಯವ ಕೃಷಿ ಮಾಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಅದಲ್ಲದೆ, 4 ಎಕರೆಯಲ್ಲಿ ಟೊಮ್ಯಾಟೊ ಸಸಿ ನೆಡಲಾಗಿದೆ. 8 ಎಕರೆಯಲ್ಲಿ ಕಬ್ಬು, 9 ಎಕರೆಯಲ್ಲಿ ನೇಂದ್ರ, ಪಚ್ಚಬಾಳೆ, ಎಲಕ್ಕಿ ಮಿಶ್ರಿತ ಬಾಳೆ, ಒಂದು ಮುಕ್ಕಾಲು ಎಕರೆ ಕಲ್ಲಂಗಡಿ, 1 ಎಕರೆಯಲ್ಲಿ ಮಂಗಳೂರು ಸೌತೆಕಾಯಿ, 1 ಎಕರೆಯಲ್ಲಿ ಸೌತೆಕಾಯಿ ಬೆಳೆದಿದ್ದು ಉಳಿದ ಜಮೀನನ್ನು ಬೇರೆ ಬೆಳೆ ಬೆಳೆಯಲು ಹದ ಮಾಡಿದ್ದಾರೆ.
ಲಕ್ಷಾಂತರ ರೂ. ತಂದು ಕೊಡುವ ಕಲ್ಪವೃಕ್ಷ: ತೆಂಗಿನ ಮರವನ್ನು ದೇವರಂತೆ ರೈತರು ಕಾಣುತ್ತಾರೆ. ಏಕೆಂದರೆ 1 ಬಾರಿ ಫಲ ಕೊಡಲು ಪ್ರಾರಂಭಿಸಿದರೆ 100 ವರ್ಷ ಕೈಹಿಡಿಯುತ್ತದೆ. ಅದರಂತೆ ಇಬ್ಬರು ಸಹೋದರರು ತಮ್ಮ ಜಮೀನಿನಲ್ಲಿ 150 ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಪ್ರತಿ ತಿಂಗಳು ಎಳನೀರು ಕೀಳುವುದರಿಂದ ತಿಂಗಳಲ್ಲೇ ಸಾವಿರಾರು ರೂ. ಸಂಪಾದನೆ ಮಾಡುತ್ತಾರೆ. ಕಾಯಿ, ಕೊಬ್ಬರಿ ಇನ್ನಿತರ ವಸ್ತುಗಳು ಸೇರಿದಂತೆ ವರ್ಷಕ್ಕೆ ಲಕ್ಷಾಂತರ ರೂ. ಪಡೆಯುತ್ತಾರೆ. ಇದೀಗ 250 ಹೊಸ ತೆಂಗಿನ ಸಸಿಗಳನ್ನು ಬೆಳೆಸುತ್ತಿದ್ದಾರೆ.

ಖರ್ಚು ತಗ್ಗಿಸುವ ಸಾವಯವ ಕೃಷಿ:
ಆಧುನಿಕ ವ್ಯವಸಾಯ ಪದ್ಧತಿಯಲ್ಲಿ ಅಧಿಕವಾಗಿ ರಾಸಾಯನಿಕ ಗೊಬ್ಬರಗಳ ವ್ಯವಸಾಯ ಪದ್ಧತಿ ಮಾಡುತ್ತಿದ್ದಾರೆ. ಇತ್ತೀಚೆಗೆ ಗೊಬ್ಬರದ ಬೆಲೆ ಗಗನಕ್ಕೇರಿದೆ. ಇದಕ್ಕೆ ಹೊಲಿಸಿದರೆ ಸಾವಯವ ಕೃಷಿಯ ಖರ್ಚು ಕಡಿಮೆ. ಹಾಗೆಯೇ ಭೂಮಿಯೂ ಆರೋಗ್ಯವಾಗಿರುತ್ತದೆ. ಒಂದು ನಾಡ ಹಸು ಸಾಕಿದರೆ ಅದರ ಸಗಣಿ, ಗೋಮೂತ್ರದಿಂದ ಕನಿಷ್ಠ 2 ಎಕರೆಯಲ್ಲಿ ವ್ಯವಸಾಯ ಮಾಡಬಹುದು. ಆದ್ದರಿಂದಲೆ ಪ್ರಾರಂಭದಲ್ಲಿ 1 ಹಸು ಖರೀದಿ ಮಾಡಿ 4 ಎಕರೆಯಲ್ಲಿ ಸಾವಯವ ಕೃಷಿ ಪ್ರಾರಂಭಿಸಿದ್ದೇನೆ. ಇದರ ಜತೆ, ಬೆಲ್ಲ, ಬೇವಿನ ಅಂಶವಿರುವ ಸಾವಯವ ಗೊಬ್ಬರ ಬಳಸಲಾಗುತ್ತಿದೆ ಎಂದು ಸಹೋದರರು ಹೇಳುತ್ತಾರೆ.
ಹನಿ ನೀರಾವರಿಯೂ ಇದೆ : ಜಮೀನಿನಲ್ಲಿ ಸಂಪೂರ್ಣ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. 8 ಬೋರ್‌ವೆಲ್‌ಗಳಿದ್ದು. ಸ್ವಂತ ಟ್ರ್ಯಾಕ್ಟರ್‌ಗಳಿವೆ. ಇವುಗಳನ್ನು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ನೀರಿನ ಅಂಶ ಜಮೀನಿನಲ್ಲಿ ಉಳಿಯಬೇಕೆಂಬ ಉದ್ದೇಶದಿಂದ ಕಟಾವು ಮಾಡಿದ ಕಬ್ಬಿನ ತರಗೆಲೆಯನ್ನು ಜಮೀನನಲ್ಲಿ ಕೊಳೆಸುತ್ತಾರೆ. ಜಮೀನಿನಲ್ಲಿ ಬೆಳೆದ ಕಳೆಯನ್ನು ಭೂಮಿಯಲ್ಲಿಯೆ ಬಿಟ್ಟು ಗೊಬ್ಬರ ಮಾಡುವುದರಿಂದ ಉತ್ತಮ ಇಳುವರಿ ಕಾಣುತ್ತಿದ್ದಾರೆ.

ಮೊದಲು ಸಾವಯವ ಕೃಷಿ ಮಾಡಲು ನಿರ್ಧರಿಸಿದಾಗ ರಾಸಾಯನಿಕ ಪದ್ಧತಿಗೆ ಹೊಂದಿಕೊಂಡ ಭೂಮಿಯಲ್ಲಿ ಸಾವಯವ ನಷ್ಟ ಉಂಟು ಮಾಡುತ್ತದೆ ಎಂದು ಕೆಲವರು ಹೆದರಿಸಿದ್ದರು. ಆದರೀಗ, ನಮ್ಮ ಸಾವಯವ ಪದ್ಧತಿಯ ಬಾಳೆಯನ್ನು ಅವರೇ ನೋಡಲು ಬರುತ್ತಾರೆ. ಸಾವಯವ ಕೃಷಿ ಕೈ ಹಿಡಿಯುವ ನಂಬಿಕೆ ಬಂದಿದೆ. ಹಂತ ಹಂತವಾಗಿ ರಾಸಾಯನಿಕ ಮುಕ್ತ ವ್ಯವಸಾಯ ಮಾಡುತ್ತೇವೆ.-ಮಹದೇವಸ್ವಾಮಿಬೂದಿತಿಟ್ಟು ಯೂಟ್ಯೂಬ್ ಪ್ರಗತಿಪರ ಸಾವಯವ ಕೃಷಿಕರ ನೋಡುತ್ತಿದ್ದೆ. ಇದರಿಂದ ಪ್ರೇರಣೆಗೊಂಡು 4 ಎಕರೆಯಲ್ಲಿ ನಾವಿಬ್ಬರು ಸಾವಯವ ಕೃಷಿ ಪ್ರಾರಂಭಿಸಿದ್ದೇವೆ. ಆರೋಗ್ಯ ದೃಷ್ಟಿಯಿಂದ ಪುರಾತನ ಸಾವಯವ ಕೃಷಿ ಅತ್ಯಗತ್ಯವಾಗಿದೆ. ಪ್ರಾರಂಭದಲ್ಲಿಯೇ ಸಾವಯವ ವ್ಯವಸಾಯ ಮಾಡುವ ವಿಶ್ವಾಸ ಗಟ್ಟಿಯಾಗಿದೆ.-ಪ್ರಭುಸ್ವಾಮಿಬೂದಿತಿಟ್ಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net