

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡನೇ ದಿನವಾದ ಶನಿವಾರ ಮೂವರು ಅಭ್ಯರ್ಥಿಗಳಿಂದ 4 ನಾಮಪತ್ರಗಳು ಸಲ್ಲಿಕೆಯಾಗಿವೆ.
ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದಿಂದ ಕಾಮ್ರಡ್ ಎಸ್.ಸುಮಾ ಅವರು ನಾಮಪತ್ರ ಸಲ್ಲಿಸಿದರು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಚಾಮರಾಜುನಗರದ ನಿವಾಸಿಯಾಗಿರುವ ಕಾಮ್ರೆಡ್ ಎಸ್.ಸುಮಾ ಅವರು ಒಟ್ಟು 4,02,925 ರೂ, ಚರಾಸ್ತಿಯನ್ನು ಹೊಂದಿದ್ದು, ಪತಿಯ ಹೆಸರಿನಲ್ಲಿ 79,375 ರೂ, ಆಸ್ತಿಯನ್ನು ೋಷಣೆ ಮಾಡಿಕೊಂಡಿದ್ದಾರೆ. ಸುಮಾ ಅವರು ಒಬ್ಬರೇ 2 ನಾಮಪತ್ರವನ್ನು ಸಲ್ಲಿಸಿದ್ದಾರೆ. ಹನೂರು ನಿವಾಸಿಯಾಗಿರುವ ಎಂ.ಪ್ರದೀಪ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಎಂ.ಮಹೇಶ್ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ ಇದುವರೆಗೆ ನಾಲ್ಕು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಸಲ್ಲಿಕೆಯಾಗಿವೆ.