

ಚಾಮರಾಜನಗರ: ಶಿಕ್ಷಣ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಇಲಾಖೆಯ ಕಾನೂನು ತಿಳಿದು ಆಡಳಿತ ನಡೆಸಬೇಕಾಗುತ್ತದೆ, ಜತೆಗೆ ಶೈಕ್ಷಣಿಕ ನಾಯಕತ್ವ ಬಹುಮುಖ್ಯವಾಗುತ್ತದೆ ಎಂದು ಶಾಲಾಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ತಿಳಿಸಿದರು.
ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ಅಧಿಕಾರಿ ಮತ್ತು ಶಿಕ್ಷಕಿಯರಿಗೆ ಸನ್ಮಾನ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಇಲಾಖೆಯಲ್ಲಿ ಹಲವು ಹಂತಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ನಾವು ನಮ್ಮವರು ಎಂಬ ಮನೋಭಾವನೆಯಿಂದ ಸಾಗಿದಾಗ ಎಲ್ಲರೂ ಉತ್ತಮವಾಗಿ ಸೇವೆಸಲ್ಲಿಸಬಹುದು. ಅಧಿಕಾರಿ ಮತ್ತು ಶಿಕ್ಷಕರ ನಡುವೆ ಯಾವುದೇ ರೀತಿಯ ವೈಮನಸ್ಸುಗಳು ಇಲ್ಲದೇ ವಿಶಾಲ ಮನೋಭಾವನೆಯಿಂದ ಸಾಗಬೇಕಿದೆ. ಈ ನಿಟ್ಟಿನಲ್ಲಿ ಸಾಗಿದಾಗ ಇಲಾಖೆಯನ್ನು ಇನ್ನೂ ಎತ್ತರದ ಸ್ಥಾನಕ್ಕೆ ಕೊಂಡೊಯ್ಯಬಹುದಾಗಿದೆ ಎಂದರು.
ಯಾವ ಇಲಾಖೆಯಲ್ಲಿ ಬೇಕಾದರೂ ಸೇವೆ ಸಲ್ಲಿಸಬಹುದು. ಆದರೆ ಶಿಕ್ಷಣ ಇಲಾಖೆಯಲ್ಲಿ ಚೆನ್ನಾಗಿ ಕಾನೂನು ತಿಳಿದುಕೊಂಡು ಆಡಳಿತ ನಡೆಸಬೇಕಾಗುತ್ತದೆ. ಅದರಲ್ಲೂ ಶೈಕ್ಷಣಿಕ ನಾಯಕತ್ವ ಬಹುಮುಖ್ಯವಾಗುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳಬಹುದು. ಅಧಿಕಾರಿಯಾಗಿ ಯಾವುದೇ ಶಿಕ್ಷಕರ ಜತೆಗೆ ಸಂಘರ್ಷ ಮಾಡಿಕೊಳ್ಳದೇ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲಾಖೆಯ ಕೆಲಸಗಳನ್ನು ನಿಧಾನವಾದರೂ ಬಹಳಷ್ಟು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಶಿಕ್ಷಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಅವರ ಮುಂದಿನ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ಎಂ.ಕಾಶೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಮೈಸೂರು ವಿಭಾಗ ಉಪಾಧ್ಯಕ್ಷ ಲಾಲಿಂಗಸ್ವಾಮಿ, ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ್ಯದರ್ಶಿ ಎನ್.ಸುಧಾ ಹಾಗೂ ಇನ್ನಿತರೆ ಪದಾಧಿಕಾರಿ ಉಪಸ್ಥಿತರಿದ್ದರು.
ಅಧಿಕಾರಿಗಳು ಮತ್ತು ಶಿಕ್ಷಕಿಯರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳು ಹಾಗೂ ಶಿಕ್ಷಕಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಜಿಲ್ಲಾ ಪರಿಶಿಷ್ಠ ವರ್ಗದ ಕಲ್ಯಾಣಾಧಿಕಾರಿ ಮಂಜುಳಾ, ಪ್ರಸೂತಿ ಮತ್ತು ಸೀ ರೋಗತಜ್ಞೆ ಡಾ.ಪಿ.ಭಾರತಿ, ಡಯಟ್ ಹಿರಿಯ ಉಪನ್ಯಾಸಕಿ ವಿಜಯಕುಮಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಚಂದ್ರಮ್ಮ, ಮೈಸೂರಿನ ಡಾ.ಬಿ.ಎಸ್.ದಿನಮಣಿ ಅವರನ್ನು ಸನ್ಮಾನಿಸಲಾಯಿತು. ಗಾಳಿಪುರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ.ಎಂ.ಸುಶೀಲಾ, ಸುನೀತಮ್ಮ, ಜ್ಯೋತಿ, ಮೇರಿ ಜಸಿಂತಾ, ಜಮುನಾ, ಮೀನ, ಸೂರ್ಯಪ್ರಭ, ಎಂ.ಚೈತ್ರಾ, ಸುಜಾತ, ವಿಜಯಲಕ್ಷ್ಮೀ, ಶಾಂತಮ್ಮ, ಕೆ.ಸುನೀತ, ಪ್ರೇಮ, ರಶ್ಮಿ, ಶ್ವೇತಾ, ಲಕ್ಷ್ಮಮ್ಮ, ಶೀಲಾದೇವಿ, ಎಂ.ಶ್ರೀಮತಿ, ಶಾಂತಮ್ಮ, ಜಯಲಕ್ಷ್ಮೀ, ಜಯಮ್ಮ, ರತ್ನಮ್ಮ, ರಾಜಮ್ಮ, ಚಂದ್ರ, ನಾಗಮಣಿ, ಜಯಲಕ್ಷ್ಮಮ್ಮ, ವೈ.ಬಿ.ನವೀನ, ಅಜ್ರಾ ಅಲ್ಮಾಸ್ ಅವರಿಗೆ ಉತ್ತಮ ಶಿಕ್ಷಕಿಯರು ಪ್ರಶಸ್ತಿ ನೀಡಿ ಗೌರವಿಸಲಾಯಿತು.