ಛಲವಾದಿ ಮಹಾಸಭಾದಿಂದ ಮತದಾನ ಜಾಗೃತಿ

30rajesh1
Published on

ಚಾಮರಾಜನಗರ: ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರಾಗಿದ್ದ ದಿ.ಕೆ.ಶಿವರಾಂ ಅವರ ಸ್ಮರಣಾರ್ಥ ಛಲವಾದಿ ಮಹಾಸಭಾದ ಜಿಲ್ಲಾ ಘಟಕದಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಶುಕ್ರವಾರ ಜಮಾಯಿಸಿದ ಮಹಾಸಭಾ ಪದಾಧಿಕಾರಿಗಳು ಅಲ್ಲಿಂದ ಮೆರವಣಿಗೆ ಹೊರಟರು. ಪ್ರತಿಯೊಬ್ಬರು ಮತದಾನ ಮಾಡಿ, ಸಂವಿಧಾನ ಉಳಿಸಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕೆ.ಶಿವರಾಂ ಪರ ಘೋಷಣೆ ಕೂಗಿದರು. ಶ್ರೀ ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದ ಕೆ.ಶಿವರಾಂ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುತ್ತದೆ ಎಂಬ ನಿರೀಕ್ಷೆ ಇತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಪ್ರವಾಸಕೈಗೊಂಡು ಛಲವಾದಿ ಮಹಾಸಭಾವನ್ನು ಸಂಘಟನೆ ಮಾಡುವ ತೆಗೆ ಎಲ್ಲಾ ವರ್ಗಗಳ ಮತದಾರರ ವಿಶ್ವಾಸವನ್ನು ಗಳಿಸಿಕೊಂಡಿದ್ದರು. ಅಷ್ಟರಲ್ಲಿ ಅಕಾಲಿಕ ಮರಣ ಹೊಂದಿದ್ದರು ಎಂದು ತಿಳಿಸಿದರು.

ಕೆ.ಶಿವರಾಂ ಅವರ ಸ್ಥಾನವನ್ನು ತುಂಬುವ ಸಲುವಾಗಿ ಅವರ ಪತ್ನಿ ವಾಣಿ ಕೆ.ಶಿವರಾಂ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟು ಕಣಕ್ಕಿಳಿಸುವಂತೆ ಒತ್ತಾಯ ಮಾಡಿದ್ದೇವು. ಆದರೆ, ಬಿಜೆಪಿ ಎಸ್.ಬಾಲರಾಜು ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷದಲ್ಲಾದರು ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಅಲ್ಲೂ ಕೈ ತಪ್ಪಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರಿಯ ಪಕ್ಷಗಳ ವಿರುದ್ದ ಛಲವಾದಿ ಮಹಾಸಭಾ ನಿರ್ಣಯ ಕೈಗೊಂಡು ಚುನಾವಣೆಯಲ್ಲಿ ತಕ್ಕ ಪಾಠ ಕಳುಹಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಛಲವಾಧಿ ಮಹಾಸಭಾ ರಾಜ್ಯ ಸಂಚಾಲಕ ಹಂಸರಾಜ್, ಜಿಲ್ಲಾಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಕೆ.ಆರ್.ನಾರಾಯಣ್, ನಂದೀಶ್, ರಮೇಶ್, ಮಂಟೇಸ್ವಾಮಿ, ರಂಗಸ್ವಾಮಿ, ನಾಗೇಶ್, ಗುರುಸ್ವಾಮಿ, ಅಭಿ, ಸತೀಶ್ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net