ನಗರದಲ್ಲಿ ಶೃಂಗೇರಿ ಶ್ರೀಗಳಿಗೆ ಭವ್ಯ ಸ್ವಾಗತ

29rajesh4
Published on

ಚಾಮರಾಜನಗರ: ಶೃಂಗೇರಿ ಶಾರದಾ ಪೀಠದ ಶ್ರೀವಿಧುಶೇಖರ ಭಾರತಿ ಸ್ವಾಮೀಜಿ ಚಾಮರಾಜನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಕ್ತವೃಂದದಿಂದ ಭವ್ಯ ಸ್ವಾಗತವನ್ನು ಕೋರಲಾಯಿತು.

ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಮರವಾಡಿ ಗ್ರಾಮದ ಶ್ರೀಸಪ್ತಮಾತೃಕೆ ದೇವಸ್ಥಾನಕ್ಕೇ ಶೃಂಗೇರಿ ಶಾರದಾ ಪೀಠದ ಶ್ರೀವಿಧುಶೇಖರ ಭಾರತಿ ಸ್ವಾಮೀಜಿ ಗುರುವಾರ ಆಗಮಿಸಿ ಸಪ್ತ ಮಾತೃಕೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಕ್ತರಿಗೆ ಆಶೀರ್ವಚನ ನೀಡಿದರು. ಬಳಿಕ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಶ್ರೀವಿಧುಶೇಖರ ಭಾರತಿ ಸ್ವಾಮೀಜಿ ಅವರನ್ನು ನೂರಾರು ವಿಪ್ರ ಭಾಂದವರು ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ವೇದ-ಮಂತ್ರೋಷ, ನಾದಸ್ವರದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಂ.ಹೆಗ್ಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್.ಋಗ್ವೇದಿ, ಖಜಾಂಚಿ ಬಾಲಸುಬ್ರಹ್ಮಣ್ಯಂ, ಕೊಳ್ಳೇಗಾಲ ಬ್ರಾಹ್ಮಣ ಸಂಘದ ಅಧ್ಯಕ್ಷ ಶೇಖರ್‌ಶಾಸ್ತ್ರಿ, ಯಳಂದೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಮುರಳಿ, ಬ್ರಾಹ್ಮಿ ಮಹಿಳಾ ಸಂಘದ ಅಧ್ಯಕ್ಷರು, ಸದಸ್ಯರು, ನಗರಸಭಾ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

ಹೆಬ್ಬಸೂರಿನಲ್ಲಿ ಶಾರದಾಕೃಪ ಉದ್ಘಾಟನೆ:
ತಾಲೂಕಿನ ಹೆಬ್ಬಸೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶಾರದಾಕೃಪವನ್ನು ಶೃಂಗೇರಿ ಶಾರದಾ ಪೀಠದ ಶ್ರೀವಿಧುಶೇಖರ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶೃಂಗೇರಿ ಶಾಖಾಮಠದ ಧರ್ಮಾಧಿಕಾರಿ ಶ್ರೀಧರ್‌ಪ್ರಸಾದ್, ತಾಲೂಕು ಬ್ರಾಹ್ಮಣದ ಸಂಘದ ಅಧ್ಯಕ್ಷ ನಾಗರಾಜು ಸೇರಿದಂತೆ ನೂರಾರು ಭಕ್ತರು ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ಕೋರಲಾಯಿತು. ಗ್ರಾಮದ ಅಗ್ರಹಾರದ ಸುತ್ತಲೂ ಭವ್ಯ ವೇದಿಕೆ, ಚಪ್ಪರ ಹಾಸು, ವೇದ ಘೋಷ, ಸ್ತೋತ್ರ, ಮಂತ್ರ ಪಠಣಗಳ ಮೂಲಕ ಪ್ರತಿ ಮನೆ ಮನೆಯಲ್ಲೂ ಆರತಿ ಎತ್ತುವ ಮೂಲಕ ಭಕ್ತಿ ಪೂರ್ವಕವಾಗಿ ಪರಮಾಡಿಕೊಳ್ಳಲಾಯಿತು. ಬಳಿಕ ಶ್ರೀಗಳ ನೇತೃತ್ವದಲ್ಲಿ ಧೂಳಿ ಪಾದಪೂಜೆ, ಶ್ರೀ ಶಾರದಾ ಚಂದ್ರಮೌಳೇಶ್ವರರ ಪೂಜೆ ,ಗುರು ಪಾದುಕೆ ಪೂಜೆ, ಪೂಜಾ ಕಾಣಿಕೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ನಂತರ ನೆರೆದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಯಜಮಾನರು, ಗ್ರಾಮಸ್ಥರು ಹಾಗೂ ವಿಪ್ರ ಬಂಧುಗಳು, ವಿಕ್ರಮ ಮಹಿಳೆಯರು ಶ್ರೀಗಳ ಅನುಗ್ರಹಕ್ಕೆ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net