

ಚಾಮರಾಜನಗರ: ಜಗತ್ತಿನಾದ್ಯಂತ ಅಶಾಂತಿ, ವಿಚ್ಛಿದ್ರಕಾರಿ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲಿ, ರಂಗಭೂಮಿ ಮೂಲಕ ಜನರು ಶಾಂತಿ, ಸಹಬಾಳ್ವೆ, ಸೌಹಾರ್ದತೆಯನ್ನು ಕಂಡುಕೊಳ್ಳಬಹುದಾಗಿದೆ ಎಂದು ಹಿರಿಯ ರಂಗಕರ್ಮಿ ಹಾಗೂ ಪತ್ರಕರ್ತ ಅಬ್ರಹಾಂ ಡಿಸಿಲ್ವಾ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ರಂಗತರಅಗ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಹಾಗೂ ರಂಗ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ದ, ಹಿಂಸೆ, ಕೌರ್ಯಗಳಿಗೆ ಬುದ್ದ ತೋರಿದ ಕರುಣೆಯ ಹಾದಿ ಅವಶ್ಯಕವಾಗಿದೆ. ಬಸವಣ್ಣ ದಯೆಯೇ ಧರ್ಮದ ಮೂಲ ಎಂದಿದ್ದರು. ಅಂತಹ ದಯೆಯ ಹಾದಿಯನ್ನು ನಾವೆಲ್ಲರೂ ಅನುಸರಿಸಬೇಕಿದೆ. ರಂಗಭೂಮಿಯನ್ನು ಸಾಧನವಾಗಿ ಬಳಸಿ ಹಿಂಸೆ, ಕೌರ್ಯ ಸೋಲಿಸಬೇಕಿದೆ ಎಂದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಬಸವಣ್ಣ ಮೂಕಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಹತ್ತಾರು ರಂಗ ತಂಡಗಳಿದ್ದು, ಬೆರಳೆಣಿಕೆ ತಂಡಗಳು ಸಕ್ರಿಯವಾಗಿವೇ. ಇಲ್ಲಿಯ ರಂಗಭೂಮಿ ಸಶಕ್ತವಾಗಿದೆ. ರಂಗತಂಡಗಳು ರಂಗ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಂಗತರಅಗ ಟ್ರಸ್ಟ್ ಅಧ್ಯಕ್ಷ ಸೋಮಶೇಖರ ಬಿಸಿಲ್ವಾಡಿ ಮಾತನಾಡಿ, ನಮ್ಮ ಸಂಸ್ಥೆ ಬೆಳ್ಳಿಹಬ್ಬ ಮುಗಿಸಿ 30ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಹತ್ತಾರು ರಂಗ ನಾಟಕ ಪ್ರದರ್ಶನ ಮಾಡಿದೆ. ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ನಡೆಸಿ ಜಿಲ್ಲೆಯ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಾಟಕ ಮಾಸ್ಟರ್ ಶಿವಣ್ಣ, ಹಿರಿಯ ಕಲಾವಿದ ಅಂಬಳೆ ಸಿದ್ದರಾಜು, ಮಹಾಲಿಂಗ ಗಿರ್ಗಿ, ಕಿರಣ್‌ಗಿರ್ಗಿ ,ಶಿವಶಂಕರ್‌ಚಟ್ಟು, ಜನಶಕ್ತಿ ಸುರೇಶ್, ಡಿ.ಸಿ.ಸುರೇಂದ್ರ, ಯಡಿಯೂರು ಮಹದೇವ, ಶಿವಕುಮಾರ್ ಜನ್ನೂರು ಹೊಸೂರು ಹಾಗೂ ಇತರರು ಉಪಸ್ಥಿತರಿದ್ದರು.