ಪ್ರಥಮ ಪ್ರಜೆಯೊಂದಿಗೆ ‘ಬುಡಕಟ್ಟು’ ಸಂವಾದ

017
Published on

ಚಾಮರಾಜನಗರ: ಭಾರತದ ಪ್ರಥಮ ಪ್ರಜೆಯ ಮುಂದೆ ಈ ದೇಶದ ಮೂಲ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಸುವರ್ಣಾವಕಾಶ ಒದಗಿಬರುತ್ತಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಜು.3ರಂದು ಬೆಂಗಳೂರಿನ ರಾಜಭವನದಲ್ಲಿ ಬುಡಕಟ್ಟು ಸಮುದಾಯಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಆದಿವಾಸಿಗಳನ್ನು ಸಂವಾದದಲ್ಲಿ ಭಾಗವಹಿಸಲಿದ್ದು, ಈ ಸಂಬಂಧ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಬುಧವಾರ ಅಧಿಕಾರಿಗಳ ಸಭೆ ನಡೆದಿದ್ದಾರೆ. ಅಧಿಕೃತ ಸೂಚನೆಯ ಬಳಿಕ ಆಯಾ ಜಿಲ್ಲೆಗಳ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸುವ ಬುಡಕಟ್ಟು ಜನರನ್ನು ಆಯ್ಕೆ ಮಾಡಲಿದ್ದಾರೆ.

ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಅರಣ್ಯ ಆಧಾರಿತ ಬುಡಕಟ್ಟು ಜನಾಂಗ 11 ಜಿಲ್ಲೆ, 42 ತಾಲೂಕುಗಳಲ್ಲಿ 70 ಸಾವಿರಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿಗಳಿದ್ದಾರೆ. ಇವರು ಆಗಾಗ ಸರ್ಕಾರಗಳಿಗೆ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ, ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಕೆಲವು ಕಡೆ ತಮ್ಮ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಿಕೊಡದೆ ಇರುವುದಕ್ಕೆ ವಿಧಾನಸಭಾ ಚುನಾವಣೆಯ ಮತದಾನವನ್ನೇ ಬಹಿಷ್ಕಾರ ಮಾಡಲು ತೀರ್ಮಾನಿಸಿದ್ದರು. ವಿಷಯ ತಿಳಿದ ಅಧಿಕಾರಿಗಳು ಇವರ ಮನವೊಲಿಸಿದ ಬಳಿಕ ವೋಟು ಹಾಕಿದ್ದಾರೆ. ಹೀಗೆ ಅವಕಾಶ ಸಿಕ್ಕಾಗಲೆಲ್ಲಾ ಧ್ವನಿ ಎತ್ತುವ ಬುಡಕಟ್ಟು ಜನಾಂಗಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆಗಿನ ಸಂವಾದ ದೊಡ್ಡ ವೇದಿಕೆಯಾಗಲಿದೆ.

ಬುಡಕಟ್ಟು ಸಮುದಾಯಕ್ಕೆ ಸೇರಿರುವ ದ್ರೌಪದಿ ಮುರ್ಮು ರಾಷ್ಟ್ರಪತಿಯಾದಾಗ ಮೈಸೂರು, ಕೊಡಗು, ಚಾಮರಾಜನಗರದ ಜಿಲ್ಲೆಗಳ ಆದಿವಾಸಿಗಳು ಸಂತಸ ವ್ಯಕ್ತಪಡಿಸಿದ್ದರು. ಈ ಸಮಾಜದ ಸಂಘ-ಸಂಸ್ಥೆಗಳು ಸಂಭ್ರಮಾಚರಣೆ ಮಾಡಿದ್ದವು. ಇದೀಗ ಮುರ್ಮು ಅವರನ್ನು ಭೇಟಿ ಮಾಡಲು ಸಿಗುತ್ತಿರುವ ಅವಕಾಶವನ್ನು ಬುಡಕಟ್ಟು ಜನಾಂಗದವರು ಬಳಸಿಕೊಳ್ಳಲು ಉತ್ಸುಕರಾಗಿದ್ದಾರೆ.

ರಾಷ್ಟ್ರಪತಿ ಭೇಟಿ ಮಾಡಿದ್ದ ಜೇನುಕುರುಬ:
ಗುಂಡ್ಲುಪೇಟೆಯ ಹಾಡಿನಕಣಿವೆ ಜೇನುಕುರುಬ ಸಮುದಾಯದ ಯುವಕ ಮಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಜೂ.10ರಂದು ಭೇಟಿ ಮಾಡಿದ್ದರು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾದ ಭಾಗವಹಿಸಿ ಜೇನು ಕುರುಬರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಸಲ್ಲಿಸಿದರು. ಈ ಸಂವಾದದಲ್ಲಿ 15 ರಾಜ್ಯಗಳ ಬುಡಕಟ್ಟು ಜನಾಂಗದ ಪ್ರಮುಖರು ಹಾಜರಾಗಿದ್ದರು ಎಂದು ಮಾಹಿತಿ ನೀಡಿರುವ ಮಾದ, ದುರ್ಬಲ ಸಮುದಾಯಗಳು ಅಭಿವೃದ್ಧಿ, ಬುಡಕಟ್ಟು ಸಮುದಾಯದ ಮಹಿಳೆಯಾಗಿ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಬಗ್ಗೆ ದ್ರೌಪದಿ ಮುರ್ಮು ಆಡಿದ ಮಾತುಗಳು ಸ್ಪೂರ್ತಿಯಿಂದ ಕೂಡಿದ್ದವು. ವಿಮಾನದಲ್ಲಿ ಹೋದ ಮೊದಲ ಅನುಭವ ಖುಷಿ ಕೊಟ್ಟಿತು ಎಂದು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಬುಡಕಟ್ಟು ಸಮುದಾಯದವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂವಾದ ನಡೆಸುವ ಕುರಿತು ಅಧಿಕೃತ ಸೂಚನೆ ಬರಬೇಕಿದೆ. ನಂತರ ಸಿದ್ಧತೆ ಆರಂಭಿಸಲಾಗುವುದು.ಮಂಜುಳಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ, ಚಾಮರಾಜನಗರ. ರಾಷ್ಟ್ರಪತಿಯವರೊಂದಿಗಿನ ಸಂವಾದದಲ್ಲಿ ಪುನರ್ವಸತಿ, ಭೂ ಮಾಲೀಕತ್ವ, ಗ್ರಾಮಗಳಿಗೆ ಮೂಲಸೌಕರ್ಯ, ಶಿಕ್ಷಣ,ಆರೋಗ್ಯ, ಉದ್ಯೋಗ ಮತ್ತು ಇತರೆ ವಿಚಾರಗಳ ಕುರಿತು ಸಂವಾದದಲ್ಲಿ ಭಾಗವಹಿಸುವವರು ಮನವಿ ಮಾಡಲಿದ್ದಾರೆ.ಮುತ್ತಯ್ಯ, ಕಾರ್ಯದರ್ಶಿ, ರಾಜ್ಯ ಮೂಲ ಆದಿವಾಸಿ ವೇದಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net