

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಮನ್ವಯ ಸಾಧಿಸುವ ಪ್ರಯತ್ನ ಶುರುವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳವಾರ ಕೋರ್ ಕಮಿಟಿ ಸಭೆ ನಡೆದಿದ್ದು, ಬುಧವಾರ ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎಚ್.ಡಿ.ಕುಮಾರಸ್ವಾಮಿ ಜಂಟಿಯಾಗಿ ಎರಡೂ ಪಕ್ಷಗಳ ಮುಖಂಡರ ಸಭೆ ನಡೆಸಿ ಸಮನ್ವಯದ ಪಾಠ ಮಾಡಲಿದ್ದಾರೆ.
ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಸ್.ಬಾಲರಾಜ್‌ರನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್‌ನಿಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್‌ಬೋಸ್‌ಗೆ ಟಿಕೆಟ್ ಸಿಗಲಿದ್ದು, ಇನ್ನೂ ಅಧಿಕೃತವಾಗಿ ೋಷಣೆ ಮಾಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ‘ಕೈ’ ಹಾಕಿಲ್ಲ.
ಆದರೆ ಮೈತ್ರಿ ಅಭ್ಯರ್ಥಿ ಎಸ್.ಬಾಲರಾಜ್ ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರು, ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಗಳು ಕೇಳಿಬಂದಿದ್ದವು. ಬಿಜೆಪಿ ನಾಯಕರು ಜೆಡಿಎಸ್ ಮುಖಂಡರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಕ್ಷೇತ್ರದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದರು. ಪಕ್ಷದ ಜಿಲ್ಲಾಧ್ಯಕ್ಷರೂ ಆಗಿರುವ ಹನೂರು ಶಾಸಕ ಎಂ.ಆರ್.ಮಂಜುನಾಥ್ ಸಹ ಬಿಜೆಪಿಯವರು ನಮ್ಮನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಮೈತ್ರಿ ಆರಂಭದಲ್ಲೇ ಅಪಸ್ವರ ಕೇಳಿಬರುತ್ತಿತ್ತು.
ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ತಮ್ಮ ನಿವಾಸದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ನಾಯಕರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು. ವಿಧಾನಸಭಾ ಕ್ಷೇತ್ರಗಳ ಚಿತ್ರಣಗಳ ಮಾಹಿತಿ ಪಡೆದುಕೊಂಡರು. ಮೈಸೂರಿನಲ್ಲಿ ಬುಧವಾರ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಎರಡೂ ಪಕ್ಷಗಳ ಪ್ರಮುಖ ನಾಯಕರ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಸಮನ್ವಯತೆ ಸಾಧಿಸಲು ತಿಳಿಸಲಿದ್ದಾರೆ ಎಂದು ಗೊತ್ತಾಗಿದೆ.
ಹನೂರು ಕ್ಷೇತ್ರದ ಮೇಲೆ ವಿಶ್ವಾಸ:
ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. 1 ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಶಾಸಕರಿದ್ದಾರೆ. ಹೀಗಾಗಿ ಈ ಕ್ಷೇತ್ರದ ಮೇಲೆ ಬಿಜೆಪಿಗೆ ವಿಶ್ವಾಸವಿದೆ. ಮೈತ್ರಿ ಧರ್ಮ ಪಾಲನೆ ಮಾಡುವ ಮೂಲಕ ಹನೂರಿನಲ್ಲಿ ಕಾಂಗ್ರೆಸ್‌ಗಿಂತಲೂ ಬಿಜೆಪಿಗೆ ಅಧಿಕ ಮತಗಳನ್ನು ಶಾಸಕ ಎಂ.ಆರ್.ಮಂಜುನಾಥ್ ಕೊಡಿಸಬೇಕಾಗಿದೆ. ಮಾಜಿ ಶಾಸಕ ಆರ್.ನರೇಂದ್ರ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಕ್ಷೇತ್ರದಲ್ಲಿ ತಮಗೆ ಹಿಡಿತವಿದೆ ಎಂದು ತೋರಿಸಲು ಲೋಕಸಭೆ ಚುನಾವಣೆ ವೇದಿಕೆಯಾಗಲಿದೆ. ಆರ್.ನರೇಂದ್ರ ಸಹ ಕಾಂಗ್ರೆಸ್ ಅಭ್ಯರ್ಥಿ ಪರ ಗಂಭೀರವಾಗಿ ಕೆಲಸ ಮಾಡಬೇಕಾಗಿದೆ. ಹೀಗಾಗಿ ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹೋರಾಟ ನಡೆಯಲಿದೆ. ಜತೆಗೆ ಹನೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಸಂಘಟನೆ ಮಾಡಿಕೊಂಡು ಬರುತ್ತಿರುವ ಪರಿಮಳಾ ನಾಗಪ್ಪ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಪ್ರೀತನ್ ನಾಗಪ್ಪ, ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್ ಮೈತ್ರಿ ಧರ್ಮ ಪಾಲನೆ ಮಾಡಲು ಒಗ್ಗೂಡಿ ಕೆಲಸ ಮಾಡಬೇಕಾಗಿದೆ.
ಸಂಚಲನ ಮೂಡಿಸಿದ್ದ ಎಚ್‌ಸಿಎಂ ಹೇಳಿಕೆ:
ಚಾಮರಾಜನಗರದಲ್ಲಿ ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಹನೂರು ಶಾಸಕರು ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಇರಲಿದ್ದಾರೆ ಎಂದಿದ್ದರು. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇರೆ ಅಭಿಪ್ರಾಯವನ್ನು ಮೂಡಿಸಿತ್ತು. ಮುಂದಿನ ದಿನಗಳಲ್ಲಿ ಎಂ.ಆರ್.ಮಂಜುನಾಥ್ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ ಹನೂರಿನ ಕೈ ನಾಯಕರು, ಮುಖಂಡರು ವಿರೋಧ ವ್ಯಕ್ತಪಡಿಸಿ ಸಭೆ ನಡೆಸಿದ್ದರು.
ಕ್ಷೇತ್ರಗಳಲ್ಲಿ ಜೆಡಿಎಸ್ ಹೋರಾಟ
ಜಿಲ್ಲೆ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಜೆಡಿಎಸ್ ಹೋರಾಟ ನಡೆಸಿತ್ತು. ಕೊಳ್ಳೇಗಾಲದಲ್ಲಿ ಬಿ.ಪುಟ್ಟಸ್ವಾಮಿ, ಚಾಮರಾಜನಗರದಲ್ಲಿ ಆಲೂರು ಮಲ್ಲು, ಗುಂಡ್ಲುಪೇಟೆಯಲ್ಲಿ ಕಡಬೂರು ಮಂಜುನಾಥ್, ಹನೂರಿನಲ್ಲಿ ಎಂ.ಆರ್.ಮಂಜುನಾಥ್ ಸ್ಪರ್ಧೆ ಮಾಡಿದ್ದರು. ಬಿ.ಪುಟ್ಟಸ್ವಾಮಿ, ಆಲೂರು ಮಲ್ಲು, ಕಡಬೂರು ಮಂಜುನಾಥ್ ಪರಾಜಿತರಾದರು. ಎಂ.ಆರ್.ಮಂಜುನಾಥ್ ಗೆಲುವು ಸಾಧಿಸಿದರು. ಸೋತ ಮೂವರು ಅಭ್ಯರ್ಥಿಗಳು ಹತಾಶೆಗೊಳಗಾಗಿ ನಿಷ್ಕ್ರಿಯರಾಗಿಲ್ಲ. ಕ್ಷೇತ್ರದಲ್ಲಿ ಜನರ ಸಂಪರ್ಕದಲ್ಲೇ ಇದ್ದಾರೆ.
ಜೆಡಿಎಸ್ ಗೆದ್ದ ಕ್ಷೇತ್ರ
ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 1 ಕ್ಷೇತ್ರವನ್ನು ಮಾತ್ರ ಗೆದ್ದಿರುವ ಜೆಡಿಎಸ್ ಉಳಿದ ಕಡೆಗಳಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಈ ಹಿಂದೆ ಗೆದ್ದು ಬೀಗಿತ್ತು. 2004ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಕಾಗಲವಾಡಿ ಶಿವಣ್ಣ ಗೆದ್ದಿದ್ದರು.