

ಚಾಮರಾಜನಗರ: ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಅಕ್ರಮವಾಗಿ ಪರಭಾರೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಪೊಲೀಸರು ಮಂಗಳವಾರ ಸಂಘದ ಆಸ್ತಿಯ ಮಹಜರು ಮಾಡಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಜಾಗಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಜೇಶ್ ಹಾಗೂ ಸರ್ವೇಯರ್ ನೇತೃತ್ವದ ಅಧಿಕಾರಿಗಳ ತಂಡ ಆಗಮಿಸಿ ಸಂಘಕ್ಕೆ ಸಂಬಂಧಿಸಿದ ಹಾಸ್ಟೆಲ್ ಕಟ್ಟಡ ಹಾಗೂ ಇತರೆ ಖಾಲಿ ಜಾಗದ ಮಹಜರು ಮಾಡಿದರು.
ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘವು ನಿರ್ವಹಿಸುತ್ತಿರುವ ಆದಿ ಕರ್ನಾಟಕ ಹಾಸ್ಟೆಲ್‌ಗೆ ಸೇರಿರುವ ಭೂಮಿಯವನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿರುವುದು ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿ ನಡೆಸಿರುವ ತನಿಖೆಯಿಂದ ದೃಢಪಟ್ಟಿತ್ತು. ಸಮಿತಿಯು ಫೆ.28 ರಂದು ಜಿಲ್ಲಾಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಸಿ, ಹಾಸ್ಟೆಲ್‌ಗೆ ಸೇರಿದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಹಕ್ಕು ಬದಲಾವಣೆ ಮಾಡಿರುವುದು ಕಂಡು ಬಂದಿದ್ದು, ಹಕ್ಕು ಬದಲಾವಣೆ ಮಾಡಿದವರು ಮತ್ತು ಹಕ್ಕು ಬದಲಾವಣೆ ಪಡೆದವರ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡಿ ಕಾನೂನು ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಶಿಫಾರಸಿನಲ್ಲಿ ತಿಳಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ನೇತೃತ್ವದ ತನಿಖಾ ತಂಡ ಆದಿ ಕರ್ನಾಟಕ ಅಭಿವೃದ್ಧಿ ಸಂಘಕ್ಕೆ ಸೇರಿದ ಜಾಗವನ್ನು ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ‘ವಿಜಯವಾಣಿ’ ಜತೆಗೆ ಮಾತನಾಡಿ, ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಅಕ್ರಮವಾಗಿ ಪರಭಾರೆಯಾಗಿರುವ ಕುರಿತು ತನಿಖೆಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಂಘದ ಆಸ್ತಿಯನ್ನು ಪಟ್ಟಣ ಪೊಲೀಸ್ ಅಧಿಕಾರಿ, ಸರ್ವೇಯರ್ ಹಾಗೂ ಸರ್ಕಾರಿ ಸಾಕ್ಷಿಗಳ ಸಮಾಕ್ಷಮಾ ಮಹಜರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.