

ಚಾಮರಾಜನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ಹೋಟೆಲ್ ಉದ್ಯಮ ವೇಗವಾಗಿ ಬೆಳೆಯುತ್ತಿದ್ದು, ಹೋಟೆಲ್ ಮಾಲೀಕರು ಸಂಘಟನೆಯ ಮೂಲಕ ಒಗ್ಗಟ್ಟಾಗಿ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಕರೆ ನೀಡಿದರು.
ನಗರದ ಕರಿನಂಜನಪುರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಹೋಟೆಲ್ ಮಾಲೀಕರ ಸಂಘ ಬಹಳಷ್ಟು ಪ್ರಚಾರದಲ್ಲಿದೆ. ರಾಜ್ಯ ಸಂಘದ ಜತೆಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಹೋಟೆಲ್ ಮಾಲೀಕರು ತಮ್ಮ ಹೋಟೆಲ್ ಮೇಲೆ ಗಮನ ಕೊಡುವಂತೆ, ಸಂಘದ ಬಗ್ಗೆಯೂ ಪ್ರೀತಿ ಇರಬೇಕು. ಸಂಘದ ಬೆಳವಣಿಗೆಗೆ ಅದು ಸಹಕಾರಿಯಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಹೋಟೆಲ್ ಉದ್ಯಮಕ್ಕೆ ಸಾಕಷ್ಟು ಸಮಸ್ಯೆಗಳು ಇದ್ದವು. ಆ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದೆವು. ಸಾಕಷ್ಟು ಕಾನೂನುಗಳು ಬರುತ್ತದೆ ಅದನ್ನು ವಿರೋಧಿಸದೇ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಸಂಘಟನೆ ಉತ್ತಮ ರೀತಿಯಲ್ಲಿ ಸಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡಿಕೊಳ್ಳಿ. ಹೋಟೆಲ್ ಉದ್ಯಮ ಬೆಳೆಯಲು ಸಾಕಷ್ಟು ಸಮಸ್ಯೆಗಳಿವೆ. ನುರಿತ ಕೆಲಸಗಾರರು ಸಿಗುತ್ತಿಲ್ಲ, ಈ ನಿಟ್ಟಿನಲ್ಲಿ ಕಾರ್ಮಿಕನ್ನು ತಯಾರು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿ. ಏನೇ ಸಮಸ್ಯೆ ಇದ್ದರೂ ರಾಜ್ಯ ಸಂಘವನ್ನು ಸಂಪರ್ಕ ಮಾಡಿ, ನಾವು ಎಂದಿಗೂ ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವಕಾರ್ಯದರ್ಶಿ ಜಿ.ಕೆ.ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಎಸ್‌ಎಸ್‌ಎಲ್ಸಿ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಹೋಟೆಲ್ ಉದ್ಯಮದ ಬಗ್ಗೆ ತರಬೇತಿ ನೀಡುವ ಚಿಂತನೆ ಇಟ್ಟುಕೊಳ್ಳಲಾಗಿದೆ. ಪ್ರಾವಾಸೋದ್ಯಮ ಬೆಳೆದರೆ ಹೋಟೆಲ್ ಉದ್ಯಮಕ್ಕೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನವನ್ನು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಹೋಟೆಲ್ ಮಾಲೀಕರ ಸಂಘದ ಕೋಶಾಧಿಕಾರಿ ಎಂ.ವಿ.ರಾಘವೇಂದ್ರ, ಉಪಾಧ್ಯಕ್ಷ ರವಿಶಾಸ್ತ್ರಿ, ಮಧುಕರ್ ಶೆಟ್ಟಿ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷರಾದ ಸಿ.ಓ.ಪಾಪಣ್ಣ, ಶ್ರೀನಿವಾಸ್ ರಾವ್, ಸರ್ದಾರ್ ಬೇಗ್, ಕಾರ್ಯದರ್ಶಿ ಎಸ್.ಪ್ರತಾಪ್, ಸಹ ಕಾರ್ಯದರ್ಶಿ ಜಿ.ಅಂಕಶೆಟ್ಟಿ, ಖಜಾಂಚಿ ವಿಜಯ್ ಕುಲಾಲ್, ಬೆಂಗಳೂರು ಪುಳಿಯೊಗರೆ ಹೌಸ್ ಮಾಲೀಕರಾದ ಮಹದೇವಸ್ವಾಮಿ, ಕೆ.ಜಿ.ಮಂಜುನಾಥ್, ಬಿ.ಶಂಕರ್, ಎಂ.ವೆಂಕಟೇಶ್, ಕುಮಾರ್, ಎಸ್.ಕಿರಣ್, ಶಿವನಂಜು ಹಾಗೂ ಇತರರು ಉಪಸ್ಥಿತರಿದ್ದರು.
ಹೋಟೆಲ್ ಉದ್ಯಮ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಲಿದೆ. ಗ್ರಾಹಕರ ಸೇವೆಯಿಂದ ಹಿಡಿದು ಸುಸ್ಥಿರ ಆರ್ಥಿಕತೆಯ ಅಭಿವೃದ್ಧಿಗೆ ಹೋಟೆಲ್ ಉದ್ಯಮ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಜಿಲ್ಲೆಯ ಹೋಟೇಲ್ ಮಾಲೀಕರು ಒಂದಾಗುವ ಮೂಲಕ ಸಂಘವನ್ನು ಉತ್ತಮ ರೀತಿಯಲ್ಲಿ ಬೆಳೆಸೋಣ.-ನಂದ್ಯಪ್ಪಶೆಟ್ಟಿ, ಜಿಲ್ಲಾಧ್ಯಕ್ಷ, ಹೋಟೆಲ್ ಮಾಲೀಕರ ಸಂಘ, ಚಾಮರಾಜನಗರ ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕಿನಲ್ಲಿ ಹೋಟೆಲ್ ಮಾಲೀಕರ ಸಂಘವನ್ನು ಸ್ಥಾಪಿಸುವುದೇ ನಮ್ಮ ಉದ್ದೇಶವಾಗಿದೆ. ಕಳೆದ 20 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇದು ಉತ್ತಮವಾದ ಬೆಳವಣಿಗೆಯಾಗಿದೆ.-ಸಿ.ನಾರಾಯಣಗೌಡ, ಜಿಲ್ಲಾಧ್ಯಕ್ಷ, ಹೋಟೆಲ್ ಮಾಲೀಕರ ಸಂಘ, ಮೈಸೂರು.