

ಚಾಮರಾಜನಗರ: ಚಾ.ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಕೆಲವು ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿದ್ದು, ಕಾರ್ಮಿಕರಿಗೆ ಕೆಲಸ ನೀಡುವಂತೆ ಒತ್ತಾಯಿಸಿ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯ ಮುಂಭಾಗ ಸೋಮವಾರ ಜಮಾಯಿಸಿದ ಪ್ರತಿಭಟನಾಕಾರರು ಸಿಮ್ಸ್ ಆಡಳಿತ ಮಂಡಳಿ ವಿರುದ್ಧ ೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ ಮೇಟಿ ಮಾತನಾಡಿ, ಕಾರ್ಮಿಕರು ಸಂವಿಧಾನಬದ್ಧವಾಗಿ ಕಾರ್ಮಿಕ ಸಂಘ ರಚನೆ ಮಾಡಿಕೊಂಡ ಕಾರಣಕ್ಕಾಗಿ ಹಾಗೂ ಮಹಿಳಾ ಕಾರ್ಮಿಕರಿಗೆ ಮಾಡಿದ ಅವಮಾನವನ್ನು ಪ್ರಶ್ನಿಸಿದ ಕಾರಣಕ್ಕಾಗಿ ಹಲವಾರು ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹೆರಿಗೆ ರಜೆ ಹಾಕಿದ ತಾತ್ಕಾಲಿಕ ಮಹಿಳಾ ಕಾರ್ಮಿಕರಿಗೆ ಕಳೆದ 8 ವರ್ಷಗಳಿಂದ ಹೆರಿಗೆ ಭತ್ಯೆಯನ್ನು ನೀಡದೆ ವಂಚಿಸಲಾಗಿದೆ. ಸುಮಾರು 12 ಜನ ಡಿ ಗ್ರೂಪ್ ಕಾರ್ಮಿಕರಿಂದ ಏಜೆನ್ಸಿಯವರು ಹಣ ಪಡೆದು ಕೆಲಸ ನೀಡದೇ ಇರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ ನಂತರ ಗುತ್ತಿಗೆದಾರನು ಹಣವನ್ನು ಹಿಂತಿರುಗಿಸಿ ಕೆಲಸವನ್ನು ನೀಡುವುದಾಗಿ ತಿಳಿಸಿದ್ದರೂ ಇದುವರೆಗೂ ಕೆಲಸವನ್ನು ನೀಡಿರುವುದಿಲ್ಲ ಎಂದು ಆರೋಪಿಸಿದರು.
ಈ ಕೂಡಲೇ ಕೆಲಸದಿಂದ ವಜಾ ಮಾಡಿರುವ ಸಂಘದ ಪದಾಧಿಕಾರಿಗಳನ್ನು ಮತ್ತು ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಬೇಕು. ಉಪ ಕಾರ್ಮಿಕ ಆಯುಕ್ತರ ಆದೇಶದಂತೆ 5 ಜನ ಕಾರ್ಮಿಕರ 3 ತಿಂಗಳ ವೇತನವನ್ನು ತಕ್ಷಣವೇ ಪಾವತಿ ಮಾಡಬೇಕು. ಕರೋನ ವಾರಿಯರ್ಸ್ ಆಗಿ ಕೆಲಸಮಾಡಿದ ಶುಶ್ರೂಷಕರನ್ನು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯ ಮಾಡಿದರು. ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರಾದ ಡಿ.ಮಹದೇವ, ಕೆ.ಬಿರೇಗೌಡ, ಎಂ.ಕುಮಾರ್, ಎನ್.ಮಹೇಶ್, ಮಹದೇವಸ್ವಾಮಿ, ವಿನಯ್ ಹಾಗೂ ಇತರರು ಭಾಗವಹಿಸಿದ್ದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡಿದ್ದ ಹೊರಗುತ್ತಿಗೆ ನೌಕರರನ್ನು ಪೊಲೀಸರು ಬಂಧಿಸಿ ಪಟ್ಟಣ ಪೊಲೀಸ್ ಠಾಣೆತಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕಕರರು ಪೊಲೀಸ್ ಇಲಾಖೆಯ ನಡೆಯನ್ನು ಖಂಡಿಸಿ ಆಕ್ರೋಶ ಹೊರಹಾಕಿದರು. ಸಂವಿಧಾನಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುವ ಕಾರ್ಮಿಕರಿಗೆ ಅವಕಾಶ ನೀಡದಿರುವುದು ಅತ್ಯಂತ ಖಂಡನೀಯ. ಸಿಮ್ಸ್ ಆಡಳಿತ ಮಂಡಳಿ ಹಾಗೂ ಪೊಲೀಸರು ಹೊರಗುತ್ತಿಗೆ ನೌಕರರು ನ್ಯಾಯಯುತವಾಗಿ ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.