ನಿರ್ಗತಿಕರಿಗೆ ಬೇಕಿದೆ ಮತ್ತಷ್ಟು ನೆರವಿನ ಹಸ್ತ

25rajesh4
Published on

ಚಾಮರಾಜನಗರ: ಜಿಲ್ಲಾ ಕೇಂದ್ರ, ಪಟ್ಟಣ ಪ್ರದೇಶದ ಪ್ರಮುಖ ಬಸ್‌ನಿಲ್ದಾಣ, ರಸ್ತೆಬದಿ ಹಾಗೂ ಪಾಲುಬಿದ್ದ ಕಟ್ಟಡಗಳಲ್ಲಿ ನಿರಾಶ್ರಿತರು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದ್ದು, ಅಂತವರಿಗೆ ಅನುಕೂಲವಾಗುವಂತೆ ತಾಲೂಕು ಕೇಂದ್ರಗಳಲ್ಲೂ ನಿರಾಶ್ರಿತರ ಕೇಂದ್ರಗಳನ್ನು ತೆರೆಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ರಾಜ್ಯದಲ್ಲಿರುವ ನಿರಾಶ್ರಿತರು, ಭಿಕ್ಷುಕರು, ದೈಹಿಕ ಮತ್ತು ಮಾನಸಿಕವಾಗಿ ಸವಾಲುಗಳಿಗೆ ಒಳಗಾದ ದುರ್ಬಲರ ಪುನರ್ ವಸತಿಗಾಗಿ ಕರ್ನಾಟಕ ಸರ್ಕಾರವು ರಾಜ್ಯದ ಸುಮಾರು 14 ಜಿಲ್ಲೆಗಳಲ್ಲಿ ಒಂದೊಂದು ನಿರಾಶ್ರಿತರ ಪರಿಹಾರ ಕೇಂದ್ರವನ್ನು ತೆರೆದಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನಗರಸಭೆ ವತಿಯಿಂದ ನಿರಾಶ್ರಿತರಿಗೆ ಹಾಗೂ ವಸತಿ ರಹಿತರಿಗೆ ಆಸ್ರಯ ಕಲ್ಪಿಸುವ ನಿಟ್ಟಿನಲ್ಲಿ ಮೂಡಲಧ್ವನಿ ಸಂಸ್ಥೆಯ ಮೂಲಕ ನಿರಾಶ್ರಿತರ ಕೇಂದ್ರವನ್ನು ತೆರೆಯಲಾಗಿದೆ. ಈ ಮೂಲಕ ಭಿಕ್ಷಕರು, ವಸತಿ ರಹಿತ ಕೂಲಿ ಕಾರ್ಮಿಕರು, ಬೀದಿ ಬದಿಯಲ್ಲಿ ಬಿದ್ದ ಅನಾಥರವನ್ನು ಗಮನಿಸಿ, ಅವರನ್ನು ಕೇಂದ್ರಕ್ಕೆ ದಾಖಲು ಮಾಡಿ ಉಚಿತವಾಗಿ ಊಟ ವಸತಿ ನೀಡುವ ಮೂಲಕ ವಸತಿ ರಹಿತರಿಗೆ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಈ ವಸತಿ ಕೇಂದ್ರದಲ್ಲಿ 14 ಮಹಿಳೆಯರು, 9 ಮಂದಿ ಪುರುಷರು ಸೇರಿ 23 ಮಂದಿ ಆಶ್ರಯ ಪಡೆಯುವ ತೆಗೆ ಗುಣಮಟ್ಟದ ಆಹಾರ, ಆರೋಗ್ಯ ತಪಾಸಣೆ ಮತ್ತು ಶುಚಿತ್ವವನ್ನು ಕೇಂದ್ರ ಕಾಪಾಡಿಕೊಂಡು ಬರಲಾಗುತ್ತಿರುವ ಉದ್ದೇಶದಿಂದ ಚಾ.ನಗರ ನಗರಸಭೆಯು 2023-24ರಲ್ಲಿ ಡೇ ನಲ್ಮ್ ಅಭಿಮಾನದ ಉಪ ಘಟಕದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.

ಅದಾಗ್ಯೂ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಇತ್ತೀಚೆಗೆ ನಿರಾಶ್ರಿತರು ಹೆಚ್ಚಾಗಿ ಕಂಡುಬರುತ್ತಿದ್ದಾರೆ.ಬಸ್ ನಿಲ್ದಾಣಗಳು, ಪಾಲುಬಿದ್ದ ಕಟ್ಟಡಗಳು, ರಸ್ತೆಬದಿಗಳಲ್ಲಿ ವಾಸ ಮಾಡುತ್ತಿರುವುದು ಕಂಡುಬರುತ್ತಿದೆ. ಚಾ.ನಗರ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿಯನ್ನು ಹೊಂದಿರುವುದರಿಂದ ಹೊರರಾಜ್ಯಗಳಿಂದ ಭಿಕ್ಷುಕರು, ಮಾನಸಿಕ ಅಸ್ವಸ್ಥರು ಹಾಗೂ ಹಿರಿಯ ನಾಗರೀಕರನ್ನು ಬಿಟ್ಟು ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕು ಕೇಂದ್ರಗಳಲ್ಲೂ ನಿರಾಶ್ರಿತರ ಕೇಂದ್ರಗಳನ್ನು ತೆರೆಯುವ ಮೂಲಕ ಅಂತವರಿಗೆ ನೆರವಾಗಬೇಕು ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಮೂಲಕ ಸಾರ್ವಜನಿಕರು ಹಾಗೂ ಅಧಿಕಾರಿಗಳ ಅಭಿಪ್ರಾಯಗಳನ್ನು ಲೌಡ್‌ಸ್ಪೀಕರ್‌ನಲ್ಲಿ ಸಂಗ್ರಹಿಸಲಾಗಿದೆ.

ಮಾನಸಿಕ ಅಸ್ವಸ್ಥರಿಗೆ ನೆರವಾಗಿ
ಚಾ.ನಗರ ನಗರಸಭೆ ವತಿಯಿಂದ ನಿರಾಶ್ರಿತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರೆದಿದೆ. ಆದರೆ ಇಂದಿಗೂ ಹಲವಾರು ನಿರ್ಗತಿಕರು ಸೂಕ್ತವಾದ ಮಾಹಿತಿ ಇಲ್ಲದೇ ಬಸ್‌ನಿಲ್ದಾಣ ಹಾಗೂ ಇನ್ನಿತರೆ ಕಡೆಗಳಲ್ಲಿ ಮಲಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಸಾಕಷ್ಟು ಜನರು ಇಂತಹ ನಿರ್ಗತಿಕರು ಕಂಡುಬರುತ್ತಾರೆ. ನಗರದ 3-4 ಜನರು ಮಾನಸಿಕ ಅಸ್ವಸ್ಥರು ತಿರಗಾಡುವುದು ಕಂಡುಬರುತ್ತಿದೆ. ಅಂತವರಿಗೆ ಸೂಕ್ತ ಚಿಕಿತ್ಸೆ ನೀಡಿ, ಅವರಿಗೂ ಬದುಕುರೂಪಿಸುವ ನಿಟ್ಟಿನಲ್ಲಿ ನಗರಸಭೆ ಯೋಚಿಸಬೇಕಿದೆ.
ನವೀನ್, ಜ್ಯೋತಿಗೌಡನಪುರ, ಚಾಮರಾಜನಗರ

ಹೆಚ್ಚಿನ ಆಸಕ್ತಿವಹಿಸಲಾಗುವುದು
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ವರ್ತಕರ ಭವನದ ಸಮೀಪದಲ್ಲಿ ಮೂಡಲಧ್ವನಿ ಸಂಸ್ಥೆಯ ಮೂಲಕ ನಿರಾಶ್ರಿತರ ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿ ಸುಮಾರು 23 ಜನರು ಇದ್ದಾರೆ. ಈ ನಿರಾಶ್ರಿತರ ಕೇಂದ್ರ ಉತ್ತಮ ಕಾರ್ಯನಿರ್ವಹಿಸುತ್ತಿರುವ ನಿಟ್ಟಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಯೂ ಲಭಿಸಿದೆ. ಅದಾಗ್ಯೂ ನಿರಾಶ್ರಿತರು ಮತ್ತು ಮಾನಸಿಕ ಅಸ್ವಸ್ಥರು ಕಂಡುಬರುತ್ತಿದ್ದಾರೆ ಎಂಬ ಮಾಹಿತಿಗಳು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಅವರನ್ನು ಗುರುತಿಸಿ ಅವರಿಗೆ ನೆರವು ನೀಡಲು ಕ್ರಮವಹಿಸಲಾಗುವುದು. ಈಗ ಇರುವ ನಿರಾಶ್ರಿತರ ಮೇಲೆಯೂ ಹೆಚ್ಚಿನ ಆಸಕ್ತಿವಹಿಸಲಾಗುವುದು.
ರಾಮದಾಸ್, ಆಯುಕ್ತರು, ನಗರಸಭೆ, ಚಾಮರಾಜನಗರ

ಅಗತ್ಯಕ್ರಮವಹಿಸಲಾಗುವುದು
ಒಂದು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರೆಯಲು ಅವಕಾಶವಿದೆ. ಆದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಾಶ್ರಿತ ಕೇಂದ್ರ ತೆಗೆಯಲು ಅವಕಾಶವಿಲ್ಲ. ಸದ್ಯ ಹಲವಾರು ನಿರ್ಗತಿಕರು ಬಸ್ ನಿಲ್ದಾಣದಲ್ಲಿ ಉಳಿದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು.
ಶ್ರೀಧರ್, ಮುಖ್ಯಾಧಿಕಾರಿ ಹನೂರು ಪಪಂ

ಬಸ್‌ನಿಲ್ದಾಣದಲ್ಲೇ ವಾಸ
ಹನೂರಿನಲ್ಲಿ ಕೆಲವು ನಿರ್ಗತಿಕರಿದ್ದು, ಬೆಳಗ್ಗೆ ವೇಳೆ ರಸ್ತೆಗಳಲ್ಲಿ ಅಡ್ಡಾಡುತ್ತಿರುತ್ತಾರೆ. ರಾತ್ರಿ ವೇಳೆ ಬಸ್ ನಿಲ್ದಾಣ ಹಾಗೂ ಇನ್ನಿತರೆ ಕಡೆಗಳಲ್ಲಿ ತಂಗುತ್ತಿದ್ದಾರೆ. ಆದರೆ ಈ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಇನ್ನು ಮುಂದಾದರೂ ಇತ್ತ ಗಮನಹರಿಸಿ ಪಟ್ಟಣದಲ್ಲಿ ನಿರಾಶ್ರಿತರ ಕೇಂದ್ರ ತೆರೆಯಬೇಕು. ಇಲ್ಲವೇ ಇರುವೆಡೆ ನಿರಾಶ್ರಿತರ ಕೇಂದ್ರಗಳಿಗೆ ಅವರನ್ನು ಕಳುಹಿಸಲು ಕ್ರಮಕೈಗೊಳ್ಳಬೇಕು.
ಬಸವರಾಜು, ನಿವಾಸಿ, ಹನೂರು

ಕೇಂದ್ರಗಳನ್ನು ಖಾಸಗಿಯವರಿಗೆ ವಹಿಸಬೇಡಿ
ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣ, ಪ್ರಮುಖ ರಸ್ತೆ ಗಳಲ್ಲಿ, ಪಾಳು ಬಿದ್ದ ಕಟ್ಡಗಳಲ್ಲಿ ಅಸಕ್ತರು, ನಿರ್ಗತಿಕರು, ಮಾನಸಿಕ ಅಸ್ವಸ್ಥರು ವಾಸವಿದ್ದಾರೆ. ಇಂತಹವರನ್ನು ಗುರುತಿಸಿ ಆಶ್ರಯ ನೀಡಬೇಕಿದೆ. ಪ್ರಸ್ತುತ ಸಮಾಜದಲ್ಲ ಮಾನವ ಸಂಬಂಧಕ್ಕೆ ಮೌಲ್ಯವೇ ಇಲ್ಲದಂತಾಗಿದೆ. ಆದ್ದರಿಂದ ತಾಲೂಕು ಹಂತದಲ್ಲಿ ನಿರ್ಗತಿಕರನ್ನು ಗುರುತಿಸಿ ವಸತಿ ಸೇವೆ ನೀಡಬೇಕು. ಯಾವುದೋ ಖಾಸಗಿ ಸಂಸ್ಥೆಗೆ ಒಪ್ಪಿಸದೆ ಸರ್ಕಾರವೇ ನಿರ್ಗತಿಕರ ವಸತಿ ಕೇಂದ್ರವನ್ನು ನಿರ್ವಹಣೆ ಮಾಡಬೇಕಿದೆ.
ಶಿವಮ್ಮ, ಕಾರ್ಯಕರ್ತೆ, ಸ್ವರಾಜ್ ಸಂಘಟನೆ, ಕೊಳ್ಳೇಗಾಲ

ಕೇಂದ್ರ ತೆರೆಯಲು ಮಾನದಂಡಗಳಿವೆ
ಜಿಲ್ಲಾ ಕೇಂದ್ರದಲ್ಲಿ ನಿರ್ಗತಿಕರ ಆಶ್ರಯ ಕೇಂದ್ರವಿದೆ. ನಗರಸಭೆ ವ್ಯಾಪ್ತಿಯಲ್ಲಿ ತೆರೆಯಲು ಆದೇಶ ವಿರುವುದಿಲ್ಲ. ಆಶ್ರಯ ಕೇಂದ್ರ ತೆರೆಯಲು ಕೆಲವು ಮಾನ ದಂಡಗಳಿರುತ್ತವೆ. ಅದನ್ನು ಅನುಸರಿಯೇ ನಿರಾಶ್ರಿತರ ಕೇಂದ್ರ ತೆರೆಯಬೇಕಿದೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುವ ಕೇಂದ್ರವಿಲ್ಲ. ಮುಂದಿನ ದಿನಗಳಲ್ಲಿ ಕೊಳ್ಳೇಗಾಲದಲ್ಲಿರುವ ಅಸಕ್ತರು, ನಿರ್ಗತಿಕರಿಗೆ ಆಶ್ರಯ ಸಿಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.
ಎ.ರಮೇಶ್,ಆಯುಕ್ತರು, ನಗರಸಭೆ, ಕೊಳ್ಳೇಗಾಲ

ನಿರಾಶ್ರಿತರನ್ನು ಗುರುತಿಸಲು ಸಮೀಕ್ಷೆ
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಾಶ್ರಿತರನ್ನು ಗುರುತಿಸಲು ಸಮೀಕ್ಷೆ ನಡೆಸಲಾಗಿದ್ದು, 3 ಜನರು ನಿರಾಶ್ರಿತರು ಇರುವುದು ಕಂಡುಬಂದಿದೆ. ಅವರು ಬಸ್ ನಿಲ್ದಾಣ ಮತ್ತು ಇನ್ನಿತರೆ ಕಡೆಗಳಲ್ಲಿ ಆಶ್ರಯಪಡೆದುಕೊಂಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಜಿಲ್ಲಾ ಕೇಂದ್ರದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.
ಮಹೇಶ್ ಕುಮಾರ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ, ಯಳಂದೂರು

ನಿರಾಶ್ರತರಿಗೆ ಹೆಚ್ಚಿನ ನೆರವು ಒದಗಿಸಿ
ತಾಲೂಕಿನ ವ್ಯಾಪ್ತಿಯಲ್ಲಿ ಬುದ್ಧಿಮಾಂದ್ಯರು, ಅಂಗವಿಕಲರು, ಸೇರಿದಂತೆ ಹಲವು ನಿರಾಶ್ರಿತರು ಇರುವುದು ಕಂಡುಬರುತ್ತಿದೆ. ಅಂತವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕಿದೆ. ಅವರ ಜೀವನಮಟ್ಟ ಸುಧಾರಣೆಗೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಅವರು ಸಮಾಜದಲ್ಲಿ ಗುರುತಿಸಿ ಕೊಳ್ಳುವುದಕ್ಕೆ ಸಹಕಾರಿಯಾದ ನೆರವು ನೀಡಬೇಕಿದೆ. ಈ ನಿಟ್ಟಿನಲ್ಲಿ ತಾಲೂಕಿನ ವ್ಯಾಪ್ತಿಯಲ್ಲೂ ನಿರಾಶ್ರಿತರ ಕೇಂದ್ರವನ್ನು ತೆರೆಯಬೇಕಿದೆ.
ಪರಶಿವಮೂರ್ತಿ, ನಿವಾಸಿ, ಯಳಂದೂರು

ಹೆಚ್ಚುತ್ತಿದ್ದಾರೆ ನಿರಾಶ್ರಿತರು
ಕೇರಳ ಹಾಗೂ ತಮಿಳುನಾಡಿನ ಗಡಿಯಲ್ಲಿರುವ ಗುಂಡ್ಲುಪೇಟೆ ತಾಲೂಕಿನಲ್ಲಿ ಅತಿ ಹೆಚ್ಚಿನ ನಿರ್ಗತಿಕರು, ಬುದ್ದಿಮಾಂದ್ಯರು ಕಂಡುಬರುತ್ತಿದ್ದಾರೆ. ಅದರಲ್ಲಿಯೂ ಪಟ್ಟಣದಲ್ಲಿ ಇವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಮಾನವೀಯತೆಯಿಂದ ಹಲವಾರು ಸಂಘಸಂಸ್ಥೆಗಳು ತಮ್ಮ ಕೈಲಾದ ನೆರವು ನೀಡಿತ್ತಾ ಬಂದಿದ್ದಾರೆ. ಆದ್ದರಿಂದ ಪಟ್ಟಣದಲ್ಲಿ ಪುರಸಭೆಯ ವತಿಯಿಂದ ನಿರ್ಗತಿಕರ ಕೇಂದ್ರ ಆರಂಭಿಸುವಂತೆ ಸಂಘಟನೆ ವತಿಯಿಂದ ಹಲವಾರು ಬಾರಿ ಮನವಿಸಲ್ಲಿಸಲಾಗಿದ್ದು ಸರ್ಕಾರ ತುರ್ತಾಗಿ ಈ ಕುರಿತು ಕ್ರಮವಹಿಸಬೇಕಿದೆ.
ಅಬ್ದುಲ್ ಮಾಲೀಕ್, ಸಮಾಜಸೇವಕ ಮತ್ತು ಅಧ್ಯಕ್ಷ, ಕರ್ನಾಟಕ ಕಾವಲು ಪಡೆ, ಗುಂಡ್ಲುಪೇಟೆ

ಸಂಪನ್ಮೂಲ ಕೊರತೆ
ಪಟ್ಟಣದಲ್ಲಿ ಸ್ವಯಂಸೇವಕ ಸಂಸ್ಥೆಯ ನೆರವಿನಿಂದ ನಿರ್ಗತಿಕರ ಗಣತಿ ನಡೆಸಲಾಗಿದೆ. ಪುರಸಭೆಯಲ್ಲಿ ಕೇಂದ್ರ ಆರಂಭಿಸಲು ಸಾಕಷ್ಟು ಸಂಪನ್ಮೂಲಗಳಿಲ್ಲದ ಕಾರಣ ಇವರನ್ನು ಜಿಲ್ಲಾ ಕೇಂದ್ರಕ್ಕೆ ಕಳಿಸಲಾಗುತ್ತಿದೆ.
ವಸಂತಕುಮಾರಿ, ಮುಖ್ಯಾಧಿಕಾರಿ, ಪುರಸಭೆ, ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net