ದಾಖಲೆ ಇಲ್ಲದೇ ಸಾಗಿಸುತ್ತಿದ್ದ 7 ಲಕ್ಷ ರೂ, ಹಣ ವಶ

123
Published on

ಚಾಮರಾಜನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿದ್ದು, ಜಿಲ್ಲೆಯಲ್ಲಿ ಗುರುವಾರ 6 ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಒಟ್ಟು 7,00,300 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಣಜನೂರು ಚೆಕ್‌ಪೋಸ್ಟ್ ಬಳಿ ಬಿ.ಎನ್. ರಮೇಶ್ ಮತ್ತು ಸಬ್‌ಇನ್ಸ್‌ಪೆಕ್ಟರ್ ದಿವಾಕರ್ ಮತ್ತು ತಂಡದವರು ಗುರುವಾರ ಬೆಳಿಗ್ಗೆ ಕೇರಳ ರಾಜ್ಯದಿಂದ ಚಾಮರಾಜನಗರಕ್ಕೆ ಬರುತ್ತಿದ್ದ ವಾಹನದಲ್ಲಿ ಅಬೀಬ್ ಎಂಬುವವರ ಬಳಿ ದಾಖಲೆ ಇಲ್ಲದೇ ಸಾಗಾಣೆ ಮಾಡುತ್ತಿದ್ದ 1 ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದಾರೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೇಮರಹಳ್ಳಿ ಸರ್ಕಲ್ ಬಳಿ ಮೈಸೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ವಾಹನದಲ್ಲಿ ಜಯಂತಿಲಾಲ್ ಜೈನ್, ಗೋವಿಂದರಾಜು, ಮಹಮ್ಮದ್ ಆಸೀಫ್, ರಿತೇಶ್. ವಿ.ಎಸ್. ಎಂಬುವವರಿಂದ ಕ್ರಮವಾಗಿ 40,000 ರೂ. 40,500 ರೂ. 40,000 ರೂ. ಮತ್ತು 43,000 ರೂ. ಗಳು ಸೇರಿದಂತೆ ಒಟ್ಟಾರೆ 1,63,500 ರೂ. ಗಳನ್ನು ದಾಖಲೆ ಇಲ್ಲದೆ ಸಾಗಾಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಫ್.ಎಸ್.ಟಿ ತಂಡದವರು ಮದ್ದೂರು ಚೆಕ್‌ಪೋಸ್ಟ್ ನಲ್ಲಿ ಕೇರಳದಿಂದ ಬರುತ್ತಿದ್ದ ಜೋಷ್ ಕೈನಾಂಡಿ ಅವರ ವಾಹನದಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 1 ಲಕ್ಷ ರೂ. ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಕೇರಳದಿಂದ ಬರುತ್ತಿದ್ದ ಗೂಡ್ಸ್ ಪಿಕಪ್ ವಾಹನದಲ್ಲಿ ದಾಖಲೆಗಳಿಲ್ಲದೇ ಸಾಗಿಸಲಾಗುತ್ತಿದ್ದ 1.15 ಲಕ್ಷ ರೂ.ಗಳನ್ನು ವೈನಾಡಿನ ಜಮೀರ್ ಎಂಬುವರಿಂದ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಈಚರ್ ಗೂಡ್ಸ್ ವಾಹನದಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 97,000 ರೂ.ಗಳನ್ನು ಕೋಝಿಕೋಡ್‌ನ ಹ್ಯಾರಿಸ್ ಎಂಬುವರಿಂದ ಜಪ್ತಿ ಮಾಡಲಾಗಿದೆ.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲಾರ್ ಚೆಕ್‌ಪೋಸ್ಟ್ ಬಳಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 1,24,800 ರೂ.ಗಳನ್ನು ಮೆಟ್ಟೂರಿನ ಗಣೇಶನ್ ಕೆ.ಎಂ ಎಂಬುವರಿಂದ ವಶಕ್ಕೆ ಪಡೆಯಲಾಗಿದೆ. ಪ್ರಕರಣಗಳಲ್ಲಿ ತಪಾಸಣೆ ವೇಳೆ ಹಣ ಸಾಗಿಸುತ್ತಿದ್ದವರನ್ನು ವಿಚಾರಣೆಗೊಳಪಡಿಸಿದಾಗ ಸ್ಪಷ್ಟ ಮತ್ತು ಸಮಂಜಸ ಉತ್ತರ ನೀಡದೆ ಇರುವ ಹಿನ್ನೆಲೆಯಲ್ಲಿ ಹಣವನ್ನು ಜಪ್ತಿ ಮಾಡಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ಹಣವನ್ನು ಖಜಾನೆಯಲ್ಲಿ ಠೇವಣಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net