ನನ್ನ ನಡೆ- ಮತಗಟ್ಟೆ ಕಡೆ ಜಾಗೃತಿ ಜಾಥಾ

21rajesh5
Published on

ಚಾಮರಾಜನಗರ :ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾ ಹಾಗೂ ನಗರದ ಹೃದಯಭಾಗದಲ್ಲಿ ನಿರ್ಮಿಸಿದ್ದ ಮಾನವ ಸರಪಳಿ ಎಲ್ಲರ ಗಮನ ಸೆಳೆಯಿತು.

ನಗರದ ಶ್ರೀಚಾಮರಾಜೇಶ್ವರ ದೇವಾಲಯದ ಅವರಣದಲ್ಲಿ ಗುರುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ ಹಸಿರು ನಿಶಾನೆ ತೋರಿದರು.

ಶ್ರೀಚಾಮರಾಜೇಶ್ವರ ದೇವಾಲಯದಿಂದ ಹೊರಟ ಜಾಥಾದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು, ನಾಗರಿಕರು, ನನ್ನ ನಡೆ-ಮತಗಟ್ಟೆ ಕಡೆ ಹಾಗೂ ಚುನಾವಣೆ ಪರ್ವ-ದೇಶದ ಗರ್ವ ಘೋಷಣೆಗಳನ್ನು ಮೊಳಗಿಸಿದರು. ಬಳಿಕ ನಗರದ ಹೃದಯಭಾಗದಲ್ಲಿರುವ ಶ್ರೀಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ಘೋಷಣೆ ಕೂಗಿ ಜನಜಾಗೃತಿ ಮೂಡಿಸಿದರು. ಇದೇ ವೇಳೆ ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಮಾತನಾಡಿ, ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾತದಾನದ ಬಗ್ಗೆ ಅರಿವು ಮೂಡಿಸಲು ಜಾಗೃತಿ ಜಾಥಾ ಹಾಗೂ ಮಾನವ ಸರಪಳಿ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ, ನಗರಸಭೆ ಪರಿಸರ ಎಂಜಿನಿಯರ್ ಗಿರಿಜಮ್ಮ, ಕಂದಾಯ ನಿರೀಕ್ಷಕರಾದ ಶರವಣ, ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ, ಸಮುದಾಯ ಸಂಘಟನಾ ಅಧಿಕಾರಿ ವೆಂಕಟನಾಯಕ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net