ಚಾಮರಾಜನಗರ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ(ಕೆಆರ್‌ಎಸ್) ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಎಂ.ರವಿಕುಮಾರ್ ತಿಳಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಂದಳ್ಳಿ ಮಹೇಶ್ ಅವರನ್ನು ಪಕ್ಷ ಕಣಕ್ಕಿಳಿಸುತ್ತಿದೆ. ಪಕ್ಷದಲ್ಲಿ 5 ಜನರನ್ನೊಳಗೊಂಡು ಸಮಿತಿ ಕಂದಳ್ಳಿ ಮಹೇಶ್ ಅವರನ್ನು ಆಯ್ಕೆ ಮಾಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬೇರೆ ರಾಜಕೀಯ ಪಕ್ಷಗಳು ಜಾತಿ, ಧರ್ಮದ ಆಧಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ. ಆದರೆ ಕೆಆರ್‌ಎಸ್ ಪಕ್ಷ ಹೋರಾಟದ ಮನೋಭಾವದಿಂದ ಬಂದಿರುವ ಕಂದಳ್ಳಿ ಮಹೇಶ್ ಅವರನ್ನು ಕಣಕ್ಕಿಳಿಸುತ್ತಿದೆ. ನಾವು ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಕಂದಳ್ಳಿ ಮಹೇಶ್ ಮಾತನಾಡಿ, ನಾನು ಹೋರಾಟದ ಮನೋಭಾವದಿಂದ ಬಂದಿದ್ದೇನೆ. ಪಾರದರ್ಶಕವಾಗಿ ಚುನಾವಣೆ ಎದುರಿಸಲು ಮತದಾರರು ಬೆಂಬಲ ನೀಡಬೇಕು. ನಮ್ಮ ಪಕ್ಷ ಭ್ರಷ್ಟಾಚಾರವನ್ನು ತೊಡೆದು ಹಾಕಲು ಪಣತೊಟ್ಟಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ಸೈಯದ್ ಸಮಿ, ಯಳಂದೂರು ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ರಂಗರಾಜು, ಪದಾಧಿಕಾರಿಗಳಾದ ರವೀಂದ್ರ, ನಿಸ್ವಾನ್, ಮುಬಾರಕ್ ಇದ್ದರು.