ಆಷಾಢದ ರಥೋತ್ಸವ ವಿಜೃಂಭಣೆಯಿಂದ ಜರುಗಲಿ

28raju2
Published on

ಚಾಮರಾಜನಗರ: ಆಷಾಢಮಾಸದಲ್ಲಿ ವಿಶೇಷವಾಗಿ ಜರುಗುವ ಶ್ರೀಚಾಮರಾಜೇಶ್ವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರುವಂತೆ ಮುಖಂಡರು ಹಲವು ಸಲಹೆಗಳನ್ನು ನೀಡಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀಚಾಮರಾಜೇಶ್ವರ ರಥೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮುಖಂಡ ರಾಮಸಮುದ್ರ ನಾಗರಾಜು ಮಾತನಾಡಿ, ಈ ಬಾರಿಯ ಜಾತ್ರೆಗೆ ಜನಸಂದಣಿ ಹೆಚ್ಚಾಗುತ್ತದೆ. ಹೀಗಾಗಿ ದೇವಸ್ಥಾನದ ಒಳಗೆ ಮತ್ತು ಹೊರಗೆ ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಿ. ರಥದ ಬೀದಿಯಲ್ಲಿ ಸರಾಗವಾಗಿ ರಥ ಸಾಗುವಂತೆ ಮರಳು ಹಾಕಬೇಕು. ರಥೋತ್ಸವ ಮುಗಿದ ನಂತರ ಅದನ್ನು ತಕ್ಷಣ ತೆರವುಗೊಳಿಸಬೇಕು. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್ ಬಸವರಾಜು ಮಾತನಾಡಿ, ಭಕ್ತಾದಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ರಥದ ಬೀದಿಯಲ್ಲಿರುವ ಗುಂಡಿಗಳನ್ನು ಮುಚ್ಚಿಸಲು, ರಥ ಸರಾಗವಾಗಿ ಸಾಗಲು ಅಗತ್ಯಕ್ರಮ ವಹಿಸಲಾಗುತ್ತದೆ ಎಂದರು. ಮುಖಂಡ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಥ ಸಾಗಲು ಅನುಕೂಲವಾಗುವಂತೆ ರಥಬೀದಿಯಲ್ಲಿ ಮರದ ರೆಂಬೆಗಳನ್ನು ಕತ್ತರಿಸಬೇಕು. ರಥೋತ್ಸವದ ವೇಳೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪಾರಂಪರಿಕ ವಿದ್ಯುತ್ ಕಂಬಗಳ ಬಲ್ಪ್‌ಗಳು ಕೆಟ್ಟುಹೋಗಿವೆ ಎಂದು ಸಭೆಯ ಗಮನ ಸೆಳೆದರು.

ಮುಖಂಡ ಜಿ.ಬಂಗಾರು ಮಾತನಾಡಿ, ಜಾತ್ರೆಯಲ್ಲಿ ನವಜೋಡಿಗಳು ಹೆಚ್ಚಾಗಿ ಭಾಗವಹಿಸುತ್ತಾರೆ. ಇವರಿಗೆ ಯುವಕರು ಪೀಪಿ ಊದಿ, ಬಣ್ಣ ಹಾಕಿ ಕಿರಿಕಿರಿ ಉಂಟು ಮಾಡುತ್ತಾರೆ, ಇದಕ್ಕೆ ನಿಷೇಧ ಏರಬೇಕು ಎಂದು ಮನವಿ ಮಾಡಿದರು.ಮುಖಂಡ ಸುರೇಶ್ ವಾಜಪೇಯಿ ಮಾತನಾಡಿ, ರಥದ ಮನೆಯ ಛಾವಣಿ ನಿರ್ಮಾಣಕ್ಕೆ ಆದಷ್ಟು ಬೇಗ ಕ್ರಮ ವಹಿಸಿ. ದೇವಸ್ಥಾನದ ಆದಾಯದ ಮೂಲಗಳನ್ನು ಹುಡುಕಿ, ಇಲಾಖೆಯ ವಶಕ್ಕೆ ಪಡೆದುಕೊಳ್ಳಿ. ಭಕ್ತಾದಿಗಳಿಗೆ ರಥೋತ್ಸವದ ವೇಳೆ ಸೂಕ್ತ ರೀತಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ತಹಸೀಲ್ದಾರ್ ಬಸವರಾಜು ಪ್ರತಿಕ್ರಿಯಿಸಿ, ಜಾತ್ರೆಗೆ 4 ದಿನಗಳ ಮುಂಚಿತವಾಗಿ ಬಣ್ಣ ಹಾಕುವುದು ಹಾಗೂ ಜಾತ್ರೆಯಲ್ಲಿ ಹೆಚ್ಚು ಶಬ್ದ ಬರುವ ಪೀಪಿಗಳನ್ನು ನಿಷೇಧ ಮಾಡಿದ್ದೇವೆ ಎಂಬ ಬ್ಯಾನರ್ ಅಳವಡಿಸುತ್ತೇವೆ. ಮರಗಳ ರೆಂಬೆಗಳನ್ನು ಕಡಿಯುವಂತೆ ಕೆಇಬಿಯವರಿಗೆ ಸೂಚನೆ ನೀಡಲಾಗುತ್ತದೆ. ಲೋಕೋಪಯೋಗಿ ಇಲಾಖೆ ಛಾವಣಿ ನಿರ್ಮಾಣದ ಹೊಣೆ ಒತ್ತುಕೊಂಡಿತ್ತು, ಅದು ಅಪೂರ್ಣವಾಗಿದೆ. ಆದಷ್ಟು ಬೇಗ ಛಾವಣಿ ನಿರ್ಮಾಣಕ್ಕೆ ಕ್ರಮ ವಹಿಸಿ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಪೌರಾಯುಕ್ತ ರಾಮದಾಸ್ ಮಾತನಾಡಿ, ರಥೋತ್ಸವದ ವೇಳೆಯಲ್ಲಿ 100 ಮೀ. ಅಂತರದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು. ರಥೋತ್ಸವದ ವೇಳೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ನಗರಸಭಾ ಸದಸ್ಯೆ ಭಾಗ್ಯಮ್ಮ, ನೀಲಮ್ಮ, ಸುದರ್ಶನ್‌ಗೌಡ, ಚಿನ್ನಮ್ಮ, ಅಪರ ಜಿಲ್ಲಾಧಿಕಾರಿ ಗೀತಾ ಉಡೇದ, ಕೆಇಇ ರಾಜು, ಸಬ್ ಇನ್ಸ್‌ಪೆಕ್ಟರ್ ಬಿ.ಸಿ.ಸುನೀಲ್, ದೇವಸ್ಥಾನದ ಅರ್ಚಕರು, ವಿವಿಧ ಕೋಮುಗಳ ಮುಖಂಡರು ಭಾಗವಹಿಸಿದ್ದರು.

ರಾಜ್ಯದಲ್ಲೇ ವಿಶೇಷವಾಗಿ ಆಷಾಢ ಮಾಸದಲ್ಲಿ ಜರುಗುವ ಶ್ರೀಚಾಮರಾಜೇಶ್ವರ ರಥೋತ್ಸವ ಜು.3ರಂದು ನಡೆಯಲಿದೆ. ಈ ಬಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ಇರುವುದರಿಂದ ಕಳೆದ ಬಾರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆಯಾ ಕೋಮುಗಳ ಯಜಮಾನರು ಸೂಕ್ತ ಸಲಹೆ ಮತ್ತು ಸಹಕಾರ ನೀಡುತ್ತಾ ಬಂದಿದ್ದು, ಈ ಬಾರಿಯೂ ತಮ್ಮ ಮನೆಯ ಹಬ್ಬದಂತೆ ತಿಳಿದು ಒಗ್ಗಟ್ಟಿನಿಂದ ಸಹಕರಿಸಿ. ಜಾತ್ರೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ರಥೋತ್ಸವ ವಿಜೃಂಭಣೆಯಿಂದ ನೆರವೇರಲು ಎಲ್ಲರೂ ಶ್ರಮಿಸೋಣ.ಬಸವರಾಜು ತಹಸೀಲ್ದಾರ್, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net