

ಚಾಮರಾಜನಗರ: ಸಮುದಾಯದ ಜನರು ಎಲ್ಲರನ್ನೂ ಬೈದು, ವಿಡಂಬನೆ ಮಾಡಿ ಹಾಸ್ಯದ ಹೊನಲು ಹರಿಸುವುದರ ಮೂಲಕ ಸುಮಾರು 12 ವರ್ಷಗಳಿಗೊಮ್ಮೆ ನಡೆಯುವ ಶ್ರೀಬೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಥವಾ ಹಿರಿಯ ಹಬ್ಬಕ್ಕೆ ಮಂಗಳವಾರ ಸಂಭ್ರಮದ ತೆರೆಬಿದ್ದಿತು.
ತಾಲೂಕಿನ ಮಂಗಲ ಗ್ರಾಮದಲ್ಲಿ ಮಾ.17 ರಿಂದ ನಡೆಯುತ್ತಿದ್ದ ಶ್ರೀಬೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಜಾತ್ರೆಯಲ್ಲಿ ಭಾಗವಹಿಸುವ ಜನರನ್ನು ಬಾಯಿಗೆ ಬಂದಂತೆ ಬೈಯ್ಯುವುದು ಜಾತ್ರೆಯಲ್ಲಿ ಗಮನಸೆಳೆಯಿತು. ಹಾಲುಮತದಲ್ಲಿ ಕೆಲವರು, ಎದುರಿಗೆ ಬಂದ ಪ್ರಮುಖರನ್ನು, ಊರಿನ ಮುಖಂಡರನ್ನು ಬಾಯಿಗೆ ಬಂದಂತೆ ಕೊಂಕು ಮಾತುಗಳಿಂದ ಹಾಗೂ ವಿಡಂಬನೆಯಿಂದ ಬಾಜಿ ಕಟ್ಟಿದಂತೆ ಬೈಯುತ್ತಿದ್ದರು. ಇವರ ಬೈಗುಳವನ್ನು ಕೇಳಿ ಎಲ್ಲರೂ ನಕ್ಕು ಸುಮ್ಮನಾಗುತ್ತಿದ್ದರು. ಈ ಬೈಗುಳವನ್ನು ಕೇಳುವ ಸಲುವಾಗಿಯೇ ಅಕ್ಕಪಕ್ಕದ ಊರಿನ ಜನರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದು ಶ್ರೀಬೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ರಂಗತುಂಬಿತು. ತಲತಲಾಂತರಗಳಿಂದ ಈ ಸಂಪ್ರದಾಯವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಸುಮಾರು 12 ವರ್ಷಗಳಿಗೊಮ್ಮೆ ಈ ಜಾತ್ರೆಯನ್ನು ಶ್ರದ್ಧಾ-ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಸುಮಾರು 48 ಗ್ರಾಮಗಳ ಹಾಲುಮತದ ಜನರು ಈ ಜಾತ್ರೆಯಲ್ಲಿ ಭಾಗವಹಿಸಿ ಶ್ರೀ ಬೀರೇಶ್ವರಸ್ವಾಮಿ ಆಶೀರ್ವಾದ ಪಡೆದುಕೊಳ್ಳುತ್ತಾರೆ ಎಂದು ಕೋಟಂಬಳ್ಳಿ ಗ್ರಾಮದ ಹಿರಿಯರೊಬ್ಬರು ಮಾಹಿತಿ ನೀಡಿದರು.
ಹಬ್ಬಕ್ಕೆ ಸಂಭ್ರಮದ ತೆರೆ:
ಸುಮಾರು 12 ವರ್ಷಗಳಿಗೊಮ್ಮೆ ನಡೆಯುವ ಶ್ರೀಬೀರೇಶ್ವರಸ್ವಾಮಿ ಜಾತ್ರಾಮಹೋತ್ಸವಕ್ಕೆ ಮಂಗಳವಾರ ಸಂಭ್ರಮದ ತೆರೆಬಿದ್ದಿತು. ಮಂಗಲ ಗ್ರಾಮದಲ್ಲಿ ಮಾ.17 ಪ್ರಾರಂಭವಾದ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಾ ಬಂದಿದ್ದು, ಹಿರಿಯರ ಹಬ್ಬ ಎಂದೇ ಜನಪ್ರಿಯವಾಗಿರುವ ಶ್ರೀಬೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಮೂರನೇ ದಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಅಲ್ಲೇ ಊಟವನ್ನು ಸಿದ್ಧಪಡಿಸಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗವಹಿಸಿದರು. ಹಾಲುಮತದ ಸಮುದಾಯದ ಜನರು ಬೆಳಿಗ್ಗೆಯೇ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನೂರಾರು ಭಕ್ತರು ಮೆರವಣಿಗೆ ಮೂಲಕ ಮಜ್ಜನ ಆರತಿ ಸಾಲುಗಳನ್ನು ತಂದು ವಿಜೃಂಭಣೆಯಿಂದ ಉತ್ಸವ ನೆರವೇರಿಸಿದರು. ವಿವಿಧ ಗ್ರಾಮಗಳಿಂದ ಕುಟುಂಬ ಸಮೇತರಾಗಿ ಆಗಮಿಸಿ ಭಕ್ತರು ಶ್ರದ್ಧಾ ಭಕ್ತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು. ಉರಿ ಬಿಸಿಲನ್ನು ಲೆಕ್ಕಿಸದೇ ಸಹಸ್ರಾರು ಜನರು ಭಾಗಿಯಾಗಿ ಮೆರವಣಿಗೆಯಲ್ಲಿ ದೇವರನ್ನು ಹೊತ್ತು ಕುಣಿದು ಕುಪ್ಪಳಿಸಿದರು. ಈ ಮೂಲಕ ಸುಮಾರು 12 ವರ್ಷಗಳಿಗೊಮ್ಮೆ ನಡೆಯುವ ಹಿರಿಯ ಹಬ್ಬಕ್ಕೆ ಸಂಭ್ರಮದ ತೆರೆ ಬಿದ್ದಿತು.