ಲೋಕ್‌ಅದಾಲತ್‌ನಲ್ಲಿ ಒಂದಾದ ದಂಪತಿಗಳು

264e1ccf-d7f8-44b0-b01c-864a72c58625
Published on

ಚಾಮರಾಜನಗರ: ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆ ಅಡಿಯಲ್ಲಿ ನಡೆಯುವ ಲೋಕ್‌ಅದಾಲತ್‌ನಲ್ಲಿ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದ ದಂಪತಿಗಳು ಶನಿವಾರ ಒಂದಾಗಿದ್ದಾರೆ.

ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ ರಾಜಿಯೋಗ್ಯ ಪ್ರಕರಣಗಳು, ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ವಿವಿಧ ಇಲಾಖೆಗಳಲ್ಲಿ ಬಾಕಿ ಇದ್ದ ರಾಜಿಯೋಗ್ಯ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದ್ದಾರೆ.

ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಕಾರಣ ಕೌಟುಂಬಿಕ ಮಹಿಳಾ ದೌರ್ಜನ್ಯ ಸಂರಕ್ಷಣಾ ಕಾಯ್ದೆಯಡಿ ಅಂಬಳೆ ಗ್ರಾಮದ ಎಂ. ಚಂದ್ರಕಲಾ ಎಂಬುವವರು ಕೊಳ್ಳೇಗಾಲ ತಾಲೂಕು ಪಾಳ್ಯ ಗ್ರಾಮದ ರಘುರವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಯಳಂದೂರಿನ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ಸದರಿ ಪ್ರಕರಣದಲ್ಲಿನ ದಂಪತಿಗಳು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಸಾಂಸಾರಿಕ ಜೀವನ ನಡೆಸುವುದಾಗಿ ಒಪ್ಪಿಕೊಂಡರು. ಪ್ರತ್ಯೇಕವಾಗಿದ್ದ ದಂಪತಿಗಳು ಒಂದಾಗುವಂತೆ ಮಾಡಿದ್ದು ಲೋಕ್ ಅದಾಲತ್‌ನ ಪ್ರಮುಖ ವಿಶೇಷವಾಗಿದೆ.

ಚಾಮರಾಜನಗರ ತಾಲೂಕಿನ ಜಾಲಹಳ್ಳಿಹುಂಡಿ ಹೊಸ ಬಡಾವಣೆ ನಿವಾಸಿ ಇಂದ್ರಾಣಿ ಎಂಬುವರು ಅವರ ಪತಿ ಶಿವಮಲ್ಲೇಶ ಹಾಗೂ ಅತ್ತೆ, ಮಾವ, ಮೈದುನರ ವಿರುದ್ಧ ಕಿರುಕುಳ, ಅವಾಚ್ಯ ಶಬ್ದಗಳಿಂದ ನಿಂದನೆ, ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಲ್ಲೆ ಮಾಡುತ್ತಿದ್ದು, ಹಿಂಸೆ ನೀಡುತ್ತಿದ್ದಾರೆಂಬ ಸಂಬಂಧ ವ್ಯಾಜ್ಯಪೂರ್ವ ಪ್ರಕರಣವನ್ನು ದಾಖಲಿಸಿದ್ದರು.

ಈ ಪ್ರಕರಣವು ಲೋಕ್ ಅದಾಲತ್‌ನಲ್ಲಿ ಒಮ್ಮತವಾಗಿ ಇತ್ಯರ್ಥಗೊಂಡಿತು. ಇನ್ನುಮುಂದೆ ದಂಪತಿಗಳು ಯಾವುದೇ ಮನಸ್ತಾಪವಿಲ್ಲದೆ ಸಾಂಸಾರಿಕ ಜೀವನ ನಡೆಸಿಕೊಂಡು ಹೋಗುವುದಾಗಿ ಒಪ್ಪಿ ಒಂದಾಗಿದ್ದು, ಸಹ ರಾಷ್ಟ್ರೀಯ ಲೋಕ್ ಅದಾಲತ್‌ನ ಮತ್ತೊಂದು ವಿಶೇಷವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್.ಭಾರತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net