ಮಾದೇಶ್ವರ ಜನಪದ ಸಂಸ್ಕೃತಿಯ ನಾಯಕ

19rajesh3
Published on

ಚಾಮರಾಜನಗರ: ರಾಜ್ಯದಲ್ಲೇ ಅಪರವಾದ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಶ್ರೀಮಲೆ ಮಹದೇಶ್ವರ ಜನಪದ ಸಂಸ್ಕೃತಿಯ ನಾಯಕರಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮತ್ತು ಸಾಹಿತಿ ಬಿ.ಎಸ್.ವಿನಯ್ ತಿಳಿಸಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೊ.ಎಸ್.ಶಿವರಾಜಪ್ಪ ವಿರಚಿತ ಮಾದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ ಗ್ರಂಥ ವಿಶ್ಲೇಷಣೆ ಮತ್ತು ವ್ಯಕ್ತಿತ್ವ ವಿಕಸನ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಜಿಲ್ಲೆಯ ಜನಪದ ನಾಯಕರಾದ ಮಾದೇಶ್ವರ ದಕ್ಷಿಣ ಕರ್ನಾಟಕದಲ್ಲೇ ಅತ್ಯಂತ ಪ್ರಭಾವ ಬೀರಿದ ಮಹಾನ್ ಮಾನವತವಾದಿಯಾಗಿದ್ದರು. ಉತ್ತರ ಭಾಗದಿಂದ ದಕ್ಷಿಣಕ್ಕೆ ಬಂದ ಅವರು ಈ ಭಾಗದ ಜನರಿಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡಿದರು. ಮಾಂಸಹಾರ ತ್ಯಜಿಸಿ, ಸಸ್ಯಾಹಾರಿಗಳಾಗುವಂತೆ ಮಾಡಿದರು. ಈ ಭಾಗದ ಪವಾಡ ಪುರುಷ ಮಾದೇಶ್ವರ ಬೆಟ್ಟಕ್ಕೆ ಇಂದಿಗೂ ಲಕ್ಷಾಂತರ ಜನರು ಭೇಟಿ ನೀಡಿ ವಿವಿಧ ಆಚರಣೆಗಳನ್ನು ನೆರವೇರಿಸುತ್ತಾರೆ ಎಂದು ತಿಳಿಸಿದರು.

ಪತ್ರಕರ್ತರ ಅಂಶು ಪ್ರಸನ್ನಕುಮಾರ್ ಮಾತನಾಡಿ, ಈ ಭಾಗದಲ್ಲಿ ನೆಲೆಸಿದ ಮಾದೇಶ್ವರ ಇಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಿದರು. ಅವರ ಆಚಾರ ವಿಚಾರಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ಈ ನಿಟ್ಟಿನಲ್ಲಿ ಮಾದೇಶ್ವರ ಸಾಹಿತ್ಯಿಕ ನೆಲೆಗಳ ಹುಡುಕಾಟ ಗ್ರಂಥ ಬಹಳಷ್ಟು ಸಹಕಾರಿಯಾಗಲಿದೆ. ಪ್ರಶಿಕ್ಷಣಾರ್ಥಿಗಳನ್ನು ಸಾಹಿತ್ಯಿಕ ನೆಲೆಗಳ ಬಗ್ಗೆ ತಿಳಿದುಕೊಳ್ಳಬೇಕು. ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಲೆಮಾದೇಶ್ವರ ಜನಪದ ಸಾಹಿತ್ಯದಲ್ಲಿ ಪಿಎಚ್‌ಡಿ ಪಡೆದ ಡಾ.ಎಂ.ಮಹೇಶ್ ಚಿಕ್ಕಲ್ಲೂರು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ ಕೃತಿಯ ಲೇಖಕ ಪ್ರೊ.ಎಸ್.ಶಿವರಾಜಪ್ಪ, ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ಬಸವಣ್ಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net