ಐಶಾರಾಮಿ ಬದುಕು ದೇಶದ ಆತ್ಮವನ್ನು ಅರಿಯದು

19rajesh1
Published on

ಚಾಮರಾಜನಗರ: ಗಾಂಧಿಯ ಗುಡಿಸಲು ಸಮಾನತೆಯನ್ನು, ಅಂತರಂಗದ ಶ್ರೀಮಂತಿಕೆಯನ್ನು ಕಲಿಸಿಕೊಡುತ್ತದೆ. ಆದರೆ ಐಶಾರಾಮಿ ಬದುಕು ಎಂದಿಗೂ ದೇಶದ ಆತ್ಮವನ್ನು ಅರಿಯಲಾಗದು ಎಂದು ಚಿಂತಕ ಮತ್ತು ದೀನಬಂಧು ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ್ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಾಂಧಿ ಅಧ್ಯಯನ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಐಶಾರಾಮಿ ಆಸೆಗಳನ್ನು ಪೂರೈಸಿಕೊಳ್ಳಲು ಗಾಂಧಿ ತೊಡಕಾಗಿದ್ದಾನೆ. ಆದರೆ ಮತ್ತೊಬ್ಬರಿಗೆ ಒಳಿತು ಮಾಡುವ ಗುಣವಿರುವ ಕಡೆಗಳಲ್ಲಿ ಗಾಂಧಿ ನೆಲೆಸಿದ್ದಾನೆ. ಐಶಾರಾಮಿ ಬದುಕಿನಲ್ಲಿ ಹಿಂಸೆ ಅನಿವಾರ್ಯವಾಗುತ್ತದೆ, ಅಹಿಂಸೆ ಬೇಕಾದರೆ ಐಶಾರಾಮಿ ಜೀವನವನ್ನು ತೊರೆಯಿರಿ ಎಂದು ಗಾಂಧಿ ಹೇಳಿದ್ದರು. ಇಂತಹ ಸರಳತೆಯನ್ನು ಬೋಧಿಸಿದ ಗಾಂಧಿಯ ಭಾವಚಿತ್ರಕ್ಕೆ ಗುಂಡು ಹೊಡೆದು ಸಂಭ್ರಮಿಸುವವರು ಇದ್ದಾರೆ. ಆದರೆ ಗಾಂಧಿ ಅನೇಕ ವೇರುಧ್ಯಗಳ ರೂಪ ತೊಟ್ಟು ನಮ್ಮ ಎದುರಿಗೆ ಬರುತ್ತಿದ್ದಾರೆ. ಅವರನ್ನು ಮರೆತು ಬೇರೆ ದಿಕ್ಕಿನಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

ಪ್ರಸ್ತುತ ಜಗತ್ತು ಅಂತರಂಗದ ಸ್ವರಾಜ್ಯವನ್ನು ಕಳೆದುಕೊಳ್ಳುತ್ತಿದೆ. ಆಧುನಿಕ ಜೀವನಶೈಲಿಯಲ್ಲಿ ಪರಾವಲಂಬನೆಯ ಅತಿರೇಕಕ್ಕೆ ಮನುಷ್ಯ ಹೋಗಿದ್ದಾನೆ. ಮನುಷ್ಯನಿಗಿಂತಲೂ, ಮನುಷ್ಯ ಸೃಷ್ಟಿಸಿದ ವಸ್ತುಗಳ ಮೇಲೆ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಇದರಿಂದ ಜನರು ಅಂತರಂಗದ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಗಾಂಧಿವಾದಕ್ಕೆ ಎಂದೂ ಸೋಲಿಲ್ಲ, ಬದಲಾಗಿ ಅದಕ್ಕೆ ತಕ್ಕುದಾದ ಯೋಗ್ಯತೆಯನ್ನು ನಾವು ಬೆಳೆಸಿಕೊಳ್ಳಲಿಲ್ಲ. ನಮ್ಮ ದೇಶದಲ್ಲಿರುವ ಸಂಸ್ಕೃತಿ, ಉಪಸಂಸ್ಕೃತಿಯಿಂದ ನಾವು ಸಹಿಷ್ಣುತೆ ಉಳಿಸಿಕೊಂಡಿದ್ದೇವೆ. ದ್ವೇಷದಿಂದ ಗೆದ್ದದ್ದು ಕ್ಷಣಿಕ, ಪ್ರೀತಿಯಿಂದ ಗೆದ್ದಿದ್ದು ಶಾಶ್ವತವಾಗಿ ಇರುತ್ತದೆ. ನಾವು ಸೋಲುವುದನ್ನು ಕಲಿತರೆ ಗಾಂಧಿವಾದವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ಆ ಮೂಲಕ ಸೋಲನ್ನು ಗೆಲುವಾಗಿ ಬದಲಾಯಿಸಿಕೊಳ್ಳಬಹುದಾಗಿದೆ ಎಂದು ಸಹೆ ನೀಡಿದರು.

ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಎ.ಎಂ.ಶಿವಸ್ವಾಮಿ ಮಾತನಾಡಿ, ಹಲವರ ಸಹಕಾರದಿಂದ ಅಧ್ಯಯನ ಕೇಂದ್ರವನ್ನು ನಮ್ಮ ಕಾಲೇಜಿನಲ್ಲಿ ತೆರೆಯಲಾಗಿದೆ. ವಿಶೇಷವಾಗಿ ಯುವಜನತೆಯಲ್ಲಿ ಗಾಂಧಿ ಚಿಂತನೆ, ಮೌಲ್ಯಗಳನ್ನು ಪರಿಚಯ ಮಾಡಲು ಸಹಕಾರಿಯಾಗಿದೆ. ಸಹನೆ ಮತ್ತು ಸಹಬಾಳ್ವೆಯಿಂದ ಸಾಗುವ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ಗಾಂಧಿ ಅಧ್ಯಯನ ಅಗತ್ಯವಾಗಿದೆ. ಈ ಮೂಲಕ ನಮ್ಮ ಆತ್ಮವಿಕಾಸವನ್ನು ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಮತ್ತು ನಾಡೋಜ ಡಾ.ವೊಡೇ ಪಿ.ಕೃಷ್ಣ, ಕಸ್ತೂರ ಬಾ ಆಶ್ರಮ ಟ್ರಸ್ಟಿ ಪ್ರೊ.ಜಿ.ಬಿ.ಶಿವರಾಜು, ವಿಶ್ರಾಂತ ಐಜಿಪಿ ಮತ್ತು ಚಿಂತಕ ಕೆ.ಅರ್ಕೇಶ್, ಕಾರ್ಯಕ್ರಮಾಧಿಕಾರಿ ಡಾ.ಜಿ.ಮಲ್ಲೇಶ್, ಐಕ್ಯೂಎಸಿ ಸಂಚಾಲಕ ಡಾ.ಚಿನ್ಮಯಭಟ್, ಉಪನ್ಯಾಸಕಿ ದೊಡ್ಡಮ್ಮ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net