

ಚಾಮರಾಜನಗರ: ಪ್ರಾಚೀನ ಕಾಲದ ಬದುಕಿನ ರೀತಿನೀತಿಗಳನ್ನು ಅರಿಯುವ ಮೂಲಕ ವಿದ್ಯಾರ್ಥಿಗಳು ಚಾರಿತ್ರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಮೈಸೂರಿನ ವಿಭಾಗೀಯ ಪತ್ರಗಾರ ಕಚೇರಿಯ ಹಿರಿಯ ನಿರ್ದೇಶಕ ಎಚ್.ಎಲ್.ಮಂಜುನಾಥ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇತಿಹಾಸ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಪರಂಪರೆ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಪ್ರಾಚೀನ ಕಾಲದ ಚಾರಿತ್ರಿಕ ದಾಖಲೆಗಳ ಪ್ರಾಮುಖ್ಯತೆ ಎಂಬ ವಿಷಯದ ಕುರಿತು ಮಾತನಾಡಿದರು.
ಮೈಸೂರು ಮಹಾರಾಜರ ಕಾಲದಲ್ಲಿ ನಡೆದ ಆಡಳಿತ್ಮಾಕ ಸಂಗತಿಗಳನ್ನು ಮೂವತ್ತಕ್ಕೂ ಹೆಚ್ಚು ಇಲಾಖೆಗಳಲ್ಲಿ ನಿರ್ವಹಿಸಿದ ದಾಖಲೆಗಳನ್ನು ಪತ್ರಗಾರ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ. ನೂರಾರು ವರ್ಷಗಳ ದಾಖಲೆ ಪತ್ರಗಳನ್ನು ಸಂರಕ್ಷಿಸುವುದೇ ಬಹುದೊಡ್ಡ ಸವಾಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಅವುಗಳನ್ನು ಸಂರಕ್ಷಿಸಲಾಗುತ್ತಿದೆ. ದೇಶದ ಆಸ್ತಿಯಾದ ಚಾರಿತ್ರಿಕ ದಾಖಲೆಗಳು ಎಲ್ಲ ಬಗೆಯ ಸಂಶೋಧನೆಗೆ ಪ್ರಾಥಮಿಕ ಆಕರಗಳಾಗಿವೆ. ವಿದ್ಯಾರ್ಥಿಗಳು ಚಾರಿತ್ರಿಕ ದಾಖಲೆಗಳನ್ನು ಅಧ್ಯಯನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ನೀಲಕಂಠಸ್ವಾಮಿ ಮಾತನಾಡಿ, ದೇಶದ ಗತವೈಭವವನ್ನು ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ಉಳಿಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿ ಯುವಪೀಳಿಗೆ ಮೇಲಿದೆ. ಪರಂಪರೆ ಕೂಟದಿಂದ ವಿದ್ಯಾರ್ಥಿಗಳು ಐತಿಹಾಸಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಸ್.ಚಂದ್ರಮ್ಮ, ಪ್ರೊ.ಬಿ.ಗಣೇಶ್ ಪ್ರಕಾಶ್, ಪ್ರೊ.ಮಲ್ಲೇಶ್, ಪ್ರೊ.ಮಂಜುನಾಥ, ಪ್ರೊ.ಮಹದೇವಸ್ವಾಮಿ, ಪ್ರೊ.ಶಿವಸ್ವಾಮಿ, ಪ್ರೊ.ನಾಗೇಂದ್ರಕುಮಾರ್, ಉಪನ್ಯಾಸಕರಾದ ಬಿ.ಗುರುರಾಜು ಯರಗನಹಳ್ಳಿ, ಸಿದ್ದರಾಜು, ಶ್ರೀಕಂಠಸ್ವಾಮಿ, ಮಹದೇವಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.