ಭೂ ಅತಿಕ್ರಮಣ ತೆರವುಗೊಳಿಸುವಂತೆ ಮನವಿ

012
Published on

ಚಾಮರಾಜನಗರ: ಸರ್ಕಾರಿ ಗೋಮಾಳಕ್ಕೆ ಸೇರಿದ ಭೂಮಿಯನ್ನು ಭೂಗಳ್ಳರು ಕಬಳಿಸುತ್ತಿದ್ದು, ಭೂ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ಬ್ಯಾಡಮೂಡ್ಲು ಗ್ರಾಮಸ್ಥರು ಹಾಗೂ ಯಜಮಾನರು ಗ್ರೇಡ್2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಲೂಕಿನ ಹರದನಹಳ್ಳಿ ಬಸವಪುರ ಎಲ್ಲೆಗೆ ಸೇರಿದ ಸರ್ವೆ ನಂ.274 ರಲ್ಲಿ ಸರ್ಕಾರಿ ಗೋಮಾಳಕ್ಕೆ ಸೇರಿದ ನೂರಕ್ಕೂ ಹೆಚ್ಚು ಎಕರೆ ಪ್ರದೇಶವಿದೆ. ಈ ಭೂಮಿಯನ್ನು ಇತ್ತೀಚಿನ ದಿನಗಳಲ್ಲಿ ಭೂಗಳ್ಳ ಶ್ರೀಮಂತರು ಅತಿಕ್ರಮಣ ಮಾಡಿ, ಹೊಸದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇದನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸುಮಾರು ವರ್ಷಗಳಿಂದ ಹೋರಾಟ ಮಾಡಿ, ಮನವಿಗಳನ್ನು ಸಹ ಕೊಡುತ್ತಾ ಬಂದಿರುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಜಮೀನಿನ ಸುತ್ತಮುತ್ತಲೂ ಬಣ್ಣಾರಿ ಅಮ್ಮನ ದೇವಸ್ಥಾನ, ಗವಿ ಬಸವೇಶ್ವರ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳಿದ್ದು, ಪೂಜೆ ಪುನಸ್ಕಾರಗಳನ್ನು ಮಾಡಲು ಹಾಗೂ ದನಕರುಗಳನ್ನು ಸಹ ಮೇಯಿಸಲು ಅವಕಾಶವಿರುವುದಿಲ್ಲ. ಆದರೆ ಇದಕ್ಕೆ ಸಂಬಂಧಪಟ್ಟ ಸರ್ವೆ ನಂ.274ರಲ್ಲಿ ಹೊಸ ಸಾಗುವಳಿಯನ್ನು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದೇ ಗೋಮಳಾವನ್ನು ಗೋಮಳಾವನ್ನಾಗಿ ಉಳಿಸಿ, ಸಾರ್ವಜನಿಕರ ಹಿತಶಕ್ತಿಯನ್ನು ಕಾಪಾಡಬೇಕು. ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿ ಅದನ್ನು ಸರ್ವೆಮಾಡಿ, ಪರಿಶೀಲಿಸಿ ಅತಿಕ್ರಮಣ ಪ್ರದೇಶವನ್ನು ತೆರವುಗೊಳಿಸಬೇಕು ಎಂಬ ಮನವಿ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ಈ ವೇಳೆ ಬ್ಯಾಡಮೂಡ್ಲು ಗ್ರಾ.ಪಂ ಸದಸ್ಯ ರಾಜಣ್ಣ, ಮಹದೇವಶೆಟ್ಟಿ, ಮಾದಪ್ಪ, ಮರಿಸ್ವಾಮಿ, ನಿಂಗಶೆಟ್ಟಿ, ಬಿಜೆಪಿ ಮುಖಂಡ ಬಸವಣ್ಣ, ನಾಗಣ್ಣ, ಎಂ.ವಿಜಯಾ, ಯಜಮಾನರಾದ ಮಹೇಶ್, ನಾಗೇಶ್, ನಂಜುಂಡ ಶೆಟ್ಟಿ, ನಿಂಗಶೆಟ್ಟಿ, ನಂಜಶೆಟ್ಟಿ, ಅಂಕಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net