

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲೆಗಳ ನಾಯಕ ಸಮುದಾಯ ಬಿಜೆಪಿ ಪರವಾಗಿದೆ ಎಂದು ಬಿಜೆಪಿ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ತಿಳಿಸಿದರು.
ಇತ್ತೀಚಿಗೆ ಮೈಸೂರು-ಚಾಮರಾಜನಗರದ ಕೆಲವು ನಾಯಕ ಸಮುದಾಯದ ಮುಖಂಡರು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಿ ಬಿಜೆಪಿಯಲ್ಲಿ ನಾಯಕ ಸಮುದಾಯದವರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದ್ದಾರೆ. ಈ ಬಾರಿಯ ಲೋಕಸಭಾ ಚಿನಾವಣೆಯಲ್ಲಿ ತಮ್ಮನ್ನು ಪರಿಗಣಿಸದಿದ್ದರೆ ಕಾಂಗ್ರೆಸ್‌ನತ್ತಾ ಮುಖ ಮಾಡುವುದಾಗಿ ತಿಳಿಸಿದ್ದಾರೆ. ನಿಜಕ್ಕೂ ಇದು ಆತ್ಮವಂಚನೆಯ ನಡೆಯಾಗಿದ್ದು, ನಾಯಕ ಸಮುದಾಯ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ನಿಲ್ಲಲಿದೆ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಯಕ ಸಮುದಾಯದ ಮುಖಂಡರಾದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಮೈಸೂರಿನ ಮಾಜಿ ಮೇಯರ್ ಶಿವಕುಮಾರ್, ಅಪ್ಪಣ್ಣ, ಸಿದ್ದರಾಜು, ಮಲ್ಲೇಶ್ ಅವರಿಗೆ ಬಿಜೆಪಿ ಪಕ್ಷ ಈಗಾಗಲೇ ಹಲವು ಸ್ಥಾನಮಾನಗಳನ್ನು ನೀಡಲಾಗಿದೆ. ಬಿಜೆಪಿಯಲ್ಲಿ ಸಾಕಷ್ಟು ಅನುಕೂಲವನ್ನು ಪಡೆದುಕೊಂಡಿದ್ದಾರೆ. ಅದಾಗ್ಯೂ ಬಿಜೆಪಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವುದು ಸರಿಯಲ್ಲ. ಇವರು ಬಿಜೆಪಿ ಪಕ್ಷದಲ್ಲೇ ಇದ್ದುಕೊಂಡು ವಿಧಾನಸಭಾ ಚುನಾವಣೆಯಲ್ಲಿ ವಿ.ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸೋಲು ಅನುಭವಿಸಲು ಕಾರಣರಾಗಿದ್ದಾರೆ.
ನಾಯಕ ಸಮುದಾಯಕ್ಕೆ ಅವರ ಕೊಡುಗೆ ಶೂನ್ಯವಾಗಿದೆ ಎಂದು ದೂರಿದರು. ಗೋಷ್ಠಿಯಲ್ಲಿ ನಾಯಕ ಸಮುದಾಯದ ಮುಖಂಡ ರಾಜುನಾಯ್ಕ ಹಾಜರಿದ್ದರು.