

ಚಾಮರಾಜನಗರ:ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ, ತಾಲೂಕಿನ ಕನ್ನೇರಿಕಾಲನಿಯಲ್ಲಿ ಮಲೇರಿಯಾ ಜಾಗೃತಿ ಮೂಡಿಸಲಾಯಿತು.
ಕಾಲನಿಯಲ್ಲಿ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಿಗಳ ನಿಯಂತ್ರಣಾಧಿಕಾರಿ ಕಚೇರಿ ಮತ್ತು ಕಾಗಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಗಳವಾರ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಚರಣೆ ಕಾರ್ಯಕ್ರಮವನ್ನು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಿಗಳ ನಿಯಂತ್ರಣಾಧಿಕಾರಿ ಡಾ. ಕಾಂತರಾಜ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸೊಳ್ಳೆಗಳಿಂದ ಮಲೇರಿಯಾ ರೋಗ ಬರುತ್ತದೆ. ಮಲೇರಿಯಾ ರೋಗ ಲಕ್ಷ ಣಗಳಲ್ಲಿ ಮೊದಲು ಚಳಿ ನಂತರ ವಿಪರೀತ ಜ್ವರ ಬರುತ್ತದೆ. ಇದನ್ನು ಪತ್ತೆ ಹಚ್ಚಲು ಇದೇ ರಕ್ತ ತೆಗೆದು ಪರೀಕ್ಷೆ ಮಾಡಿದಾಗ ಖಚಿತಗೊಳ್ಳಲಿದೆ ಎಂದರು.
ಕಾಗಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜನಾರ್ಧನ್ ಮಾತನಾಡಿ, ಸೊಳ್ಳೆಗಳಿಂದ ಮಲೇರಿಯಾ, ಡೆಂಘೆ, ಚಿಕೂನ್‌ಗುನ್ಯಾ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳು ಬರುತ್ತವೆ. ಸೊಳ್ಳೆಗಳನ್ನು ನಿಯಂತ್ರಣ ಮಾಡಿದರೆ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ವಾಹಕ ಆಶ್ರಿತ ರೋಗಿಗಳ ನಿಯಂತ್ರಣಾಧಿಕಾರಿ ಕಚೇರಿಯ ಸಿಬ್ಬಂದಿ ಮತ್ತು ಕಾಗಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶಶ್ರೂಷಕರು ಹಾಜರಿದ್ದರು.