ಬದುಕುಕೊಟ್ಟ ಹೈನುಗಾರಿಕೆ

14rajesh4
Published on

ಕಿರಣ್ ಮಾದರಹಳ್ಳಿ ಚಾಮರಾಜನಗರ

‘ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು’..! ಹೀಗಂತ ರೈತ ಎಂ.ಸೋಮಸುಂದರ್ ಹೇಳಿದ್ದರ ಹಿಂದೆ ಇರುವ ಧೈರ್ಯವೇ ‘ಹೈನುಗಾರಿಕೆ’.

ಇವರು ತಾಲೂಕಿನ ಮಲ್ಲೇದೇವನಹಳ್ಳಿಯಲ್ಲಿ ಮಾದರಿ ಎನ್ನುವಂತೆ ಹಸು ಸಾಕಣೆ ಮಾಡುತ್ತಿದ್ದಾರೆ. ಜಮೀನಿಗೆ ಬರುವ ಹೈನೋದ್ಯಮದ ಆಸಕ್ತರೊಂದಿಗೆ ಬಿಚ್ಚು ಮನಸ್ಸಿನಿಂದ ಮಾತನಾಡುತ್ತಾರೆ. ಇದರಿಂದ ಹಸು ಸಾಕಣೆಯ ಜ್ಞಾನ ಮಾತ್ರ ವೃದ್ಧಿಸುವುದಿಲ್ಲ, ಕಷ್ಟಗಳಿಗೆಲ್ಲ ಇರುವುದು ಎರಡೇ ಔಷಧ. ಒಂದು ದುಡಿಮೆ ಮತ್ತೊಂದು ತಾಳ್ಮೆ ಎನ್ನುವುದು ಅರ್ಥವಾಗುತ್ತದೆ.

ತಮಿಳುನಾಡಿನ ಮೂಲದ ಸೋಮಸುಂದರ್ ಜೀವನದಲ್ಲಿ 28 ವರ್ಷಗಳ ಹಿಂದೆ ಕಷ್ಟಗಳೇ ಹಾಸು ಹೊದ್ದು ಮಗಿದ್ದಾಗ ಅಲ್ಲಿಂದ ಇಲ್ಲಿಗೆ ಕಾಲ್ಕಿತ್ತರು. ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಾ, ಹಣ ಕೂಡಿಟ್ಟು, ಬಡ್ಡಿ ಸಾಲ ಮಾಡಿ ಭೂಮಿಯನ್ನು ಗುತ್ತಿಗೆ ತೆಗೆದುಕೊಂಡು ಕೃಷಿ ಮಾಡುವಷ್ಟು ಶಕ್ತರಾದರು. ಇದೇ ಸಂದರ್ಭದಲ್ಲಿ 1 ಹಸು ಖರೀದಿಸಿ ಹೈನುಗಾರಿಕೆ ಶುರು ಮಾಡಿದರು. ಮತ್ತಷ್ಟು ಹಸುಗಳ ಖರೀದಿ, ಕರುಗಳ ಹುಟ್ಟಿದ್ದರಿಂದ ಹೈನೋದ್ಯಮ ದೊಡ್ಡದಾಗುತ್ತಾ ಬಂತು. ಪ್ರಸ್ತುತ 14 ಹಸುಗಳು(ಎಚ್‌ಎ್, ಜರ್ಸಿ), 1 ಹೋರಿ, 6 ಹೆಣ್ಣು ಕರುಗಳು, 7 ಗಂಡು ಕರುಗಳನ್ನು ಸಾಕುವ ಮಟ್ಟಕ್ಕೆ ಬಂದು ನಿಂತಿದ್ದಾರೆ.

ಗುತ್ತಿಗೆ ಪಡೆದಿರುವ 3 ಎಕರೆ ಜಮೀನಲ್ಲಿ ಹಸುಗಳಿಗಾಗಿ ಮೇವು ಬೆಳೆದಿದ್ದಾರೆ. ಹೀಗಾಗಿ ಹಿಂಡಿ, ಬೂಸಾ ಮಾತ್ರ ಹೊರಗಿನಿಂದ ತರುತ್ತಿದ್ದಾರೆ. 14 ಹಸುಗಳಿಂದ ಹಾಲು ಕರೆದು ಡೇರಿಗೆ ಹಾಕುತ್ತಿದ್ದಾರೆ. ದಿನಕ್ಕೆ ಕಡಿಮೆ ಎಂದರೂ 70 ಲೀಟರ್ ಹಾಲು ಸಿಗುತ್ತಿದೆ. ತಿಂಗಳಿಗೆ ಕನಿಷ್ಠ 60 ಸಾವಿರ ರೂ. ಆದಾಯ ಬರುತ್ತಿದೆ. ಹಸುವಿನ ಸಗಣಿಯನ್ನು ಸಂಗ್ರಹಿಸಿ ವರ್ಷಕ್ಕೆ 2 ಸಲ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಇವರ ಬಳಿ ಇರುವ ಗಿರ್ ಮಿಶ್ರ ತಳಿಯ ಹೋರಿಯನ್ನು ಬೇರೆ ರೈತರು ತಳಿ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದಾರೆ. ಹಸು, ಕರುಗಳು ಆರೋಗ್ಯವಾಗಿದೆ. ಎಲ್ಲ ಹಸುಗಳಿಗೂ ವಿಮೆ ಮಾಡಿಸಲಾಗಿದೆ. ಈವರೆಗೂ ಯಾವ ಹಸುಗಳೂ ರೋಗ ಬಂದು ಸತ್ತಿಲ್ಲ. ಆಗಾಗ್ಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡುತ್ತಿರುತ್ತಾರೆ.

ಇವರು ಇಲಾಖೆಗಳಿಂದ ಯಾವುದೇ ರೀತಿಯ ಸಹಾಯಧನ, ಸೌಲಭ್ಯಗಳನ್ನು ಪಡೆದುಕೊಂಡಿಲ್ಲ. ಹಸು ಸಾಕಣೆಗೆ ಹೈಟೆಕ್ ರೂಪ ಕೊಟ್ಟಿಲ್ಲ. ಹಳೇ ಕೊಟ್ಟಿಗೆಯಲ್ಲೇ ಹೈನುಗಾರಿಕೆ ನಡೆಸುತ್ತಿದ್ದಾರೆ. ಹಾಲು ಕರೆಯುವ ಯಂತ್ರ ಬಳಕೆಗೆ ಕೊಟ್ಟಿಗೆಯಲ್ಲಿ ಏರ್‌ಪೈಪ್ ಅಳವಡಿಕೆ ಮಾಡಿಕೊಂಡಿದ್ದಾರೆ. ಇತ್ತೀಚೆನ ದಿನಗಳಲ್ಲಿ ಹೈನುಗಾರಿಕೆ ಮಾಡಲು ಯುವಕರು ಉತ್ಸಾಹ ತೋರುತ್ತಿದ್ದಾರೆ. ಅಧಿಕ ಬಂಡವಾಳ ಹಾಕಿ ಹೈನೋದ್ಯಮಕ್ಕೆ ಹೈಟೆಕ್ ಸ್ಪರ್ಶ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸೋಮಸುಂದರ್ ದೇಸಿ ಶೈಲಿಯ ಹಸು ಸಾಕಣೆ ಅಧಿಕ ಬಂಡವಾಳವನ್ನು ಬಯಸುವುದಿಲ್ಲ. ಆದರೆ ಲಾಭ ಹೆಚ್ಚು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಬೇರೆ ಜಿಲ್ಲೆಗಳಿಂದ ರೈತರ ಭೇಟಿ:
ರೈತ ಸೋಮಸುಂದರ್ ಜಮೀನಿಗೆ ಬೇರೆ ಜಿಲ್ಲೆಗಳ ರೈತರು ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದಾರೆ. ಹಸು ಸಾಕಣೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಹೊಸದಾಗಿ ಹೈನುಗಾರಿಕೆ ಮಾಡಬೇಕೆಂದು ಬರುವ ಮಂಡ್ಯ ಜಿಲ್ಲೆ, ಚಾಮರಾಜನಗರ ಜಿಲ್ಲೆಯ ಆಸಕ್ತರಿಗೆ ಸಲಹೆ ನೀಡುತ್ತಿದ್ದಾರೆ. ಅನವಶ್ಯಕವಾಗಿ ಹಾಕುವ ಬಂಡವಾಳ, ಖರ್ಚಿನ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಅಧ್ಯಯನಕ್ಕಾಗಿ ಬಂದ ರೈತರು ದಿನವಿಡೀ ಜಮೀನನಲ್ಲೇ ಇದ್ದುಕೊಂಡು ಸೋಮಸುಂದರ್ ಅವರ ಹಸು ಸಾಕಣೆ, ಹಾಲು ಕರೆಯುವಿಕೆ ಮತ್ತು ಇನ್ನಿತರ ಕೌಶಲಗಳನ್ನು ತಿಳಿದುಕೊಳ್ಳುತ್ತಿದ್ದಾರೆ.

ಭಾವನಾತ್ಮಕ ಬೆಸುಗೆ:
ಸೋಮಸುಂದರ್‌ಗೆ ಹಸು ಸಾಕಣೆ ಕೇವಲ ವ್ಯವಹಾರ ಮಾತ್ರವಲ್ಲ, ಭಾವನಾತ್ಮಕ ಬೆಸುಗೆಯಾಗಿದೆ. ತಮಿಳುನಾಡಿನಲ್ಲಿದ್ದಾಗ ಸಾಲ ಹೆಚ್ಚಾಗಿತ್ತು. ಊರು ಬಿಟ್ಟು ಬರುವ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲಿಗೆ ಬಂದ ಮೇಲೆ ಹೈನುಗಾರಿಕೆ ಕೈ ಹಿಡಿಯಿತು. ಮಾಡಿದ್ದ ಸಾಲ ತೀರಿತು. ಕಷ್ಟಗಳೆಲ್ಲವೂ ಕಳೆಯಿತು. ಸೋಮಸುಂದರ್ ಜತೆಗೆ ಪತ್ನಿ ವಲ್ಲಿಯಮ್ಮ, ಮಗ ಗಣೇಶ್(ಜೇಮ್ಸ್) ಹಸು ಸಾಕಣೆಯಲ್ಲಿ ತೊಡಗಿಕೊಂಡಿದ್ದಾರೆ. ಮಗಳನ್ನು ಬಿ.ಇ ಓದಿಸಲು ಹೈನುಗಾರಿಕೆ ನೆರವಾಗಿದೆ. ತಮಿಳುನಾಡಿನಲ್ಲಿ ಸೋಮಸುಂದರ್ ಹೊಸ ಮನೆ ಕಟ್ಟಿಕೊಂಡಿದ್ದಾರೆ. ಓದು ಮುಗಿಸಿರುವ ಮಗಳು ಕೆಲಸಕ್ಕೆ ಸೇರಿದ್ದಾಳೆ. ಮಗ ಗಣೇಶ್(ಜೇಮ್ಸ್) ತಂದೆಯೊಂದಿಗೆ ಸೇರಿ ಸ್ವ ಉದ್ಯೋಗ ಮಾಡುತ್ತಿರುವ ಸಂತೃಪ್ತಿಯಲ್ಲಿದ್ದಾರೆ. ನಾನು ನಮ್ಮ ಅಪ್ಪ, ಅಮ್ಮ ಸೇರಿ ಹಸು ಸಾಕಣೆ ಮಾಡುತ್ತೇವೆ. ನಮ್ಮ ಉದ್ಯಮವನ್ನು ನಾವು ಮಾಡುತ್ತಿದ್ದೇವೆ ಎಂದಿದ್ದಾರೆ.

ಹಸು ಸಾಕಣೆ ಮಾಡಬೇಕಾದರೆ ಅನುಭವ ಬೇಕು. ಇಲ್ಲದಿದ್ದರೆ ಸಾಕಣೆ ಮಾಡಲು ಸಾಧ್ಯವಿಲ್ಲ ನಷ್ಟ ಉಂಟಾಗಲಿದೆ. ನಾವು ಈ ಉದ್ಯಮವನ್ನು ಸಂತೋಷದಿಂದ ನಡೆಸಿಕೊಂಡು ಹೋಗುತ್ತಿದ್ದೇವೆ.ಸೋಮಸುಂದರ್, ಹೈನುಗಾರಿಕೆ ಮಾಡುತ್ತಿರುವ ರೈತ, ಮಲ್ಲೇದೇವನಹಳ್ಳಿ,ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net