ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿ

14rajesh4
Published on

ಚಾಮರಾಜನಗರ : ಪ್ರಸ್ತುತ ಸಂದರ್ಭದಲ್ಲಿ ಪ್ಲಾಸ್ಟಿಕ್ ಮತ್ತು ರಾಸಾಯನಿಕ ಬಳಕೆಯಿಂದಾಗಿ ಪರಿಸರದ ಮೇಲೆ ಹೆಚ್ಚಿನ ಹಾನಿ ಉಂಟಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕಿದೆ ಎಂದು ನಾಗವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ತಿಳಿಸಿದರು.

ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಾಗವಳ್ಳಿ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸುತ್ತಲಿನ ಪರಿಸರ ನಾಶವಾಗುತ್ತಿರುವುದರಿಂದ ವಾತಾವರಣದಲ್ಲಿ ಏರುಪೇರು ಉಂಟಾಗುತ್ತಿದೆ. ಇದರಿಂದಾಗಿ ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ಮಳೆಯಾಗುತ್ತಿಲ್ಲ. ಹಾಗಾಗಿ, ತಾಪಮಾನ ಹೆಚ್ಚಳವಾಗಿ ಜನರಲ್ಲಿ ಸಾಕಷ್ಟು ರೋಗಗಳಿಗೆ ಕಾರಣವಾಗಿತ್ತು. ನಮ್ಮ ಸುತ್ತಲಿನ ಪರಿಸರವನ್ನು ನಾವು ಕಾಪಾಡದಿದ್ದರೆ ಮುಂದಿನ ಪೀಳಿಗೆಗೆ ಮತ್ತಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಶೇ.50 ಕ್ಕಿಂತಲೂ ಹೆಚ್ಚು ಅರಣ್ಯ ಪ್ರದೇಶವಿದ್ದು, ಸಾಕಷ್ಟು ವನ್ಯಪ್ರಾಣಿಗಳು ಇವೆ. ಪರಿಸರ ನಾಶದಿಂದಾಗಿ ಮನುಷ್ಯ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಬೇಕು. ಪ್ಲಾಸ್ಟಿಕ್ ಮತ್ತು ರಾಸಾಯನಿಕ ಬಳಕೆಯಿಂದ ಅಂತರ ಕಾಯ್ದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಶ್ರೀನಿವಾಸ್, ಮುಖ್ಯಶಿಕ್ಷಕಿ ಶಾಂತಿ, ಎಸ್‌ಡಿಎಂಸಿ ಸದಸ್ಯ ಮಹದೇವಸ್ವಾಮಿ, ಸಹ ಶಿಕ್ಷಕ ಕುಮಾರ್, ಮೇಲ್ವಿಚಾರಕ ಮಂಜುನಾಥ್, ಗೋವಿಂದ್, ಗ್ರಾ.ಪಂ ಸದಸ್ಯರಾದ ನಭೀಖಾನ್, ಪುಟ್ಟನಂಜಮ್ಮ, ಪುಷ್ಪಮಾಲಾ, ಶಿವರಾಜ್, ಗೌರಮ್ಮ, ಅನಿತಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net