‘ಮೇಕೆದಾಟು’ಯೋಜನೆಗಾಗಿ ಸರ್ವೇ

19raju4a
Published on

ಚಾಮರಾಜನಗರ: ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನಾ ಪ್ರದೇಶದಲ್ಲಿ ‘ಗಡಿ ಗುರುತಿಸುವಿಕೆ ಮತ್ತು ಮರಗಳ ಎಣಿಸುವಿಕೆ’ಗೆ ರಾಜ್ಯ ಸರ್ಕಾರ ಮುಂದಾಗಿದೆ.

ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜು.15ರಂದು ಆದೇಶ ಹೊರಡಿಸಿದ್ದಾರೆ. ಮೇಕೆದಾಟು ಯೋಜನೆ ಪ್ರದೇಶದಲ್ಲಿ ಸರ್ವೇ ಮಾಡಲು ಜಿಲ್ಲೆಯ ಚಾಮರಾಜನಗರ ವೃತ್ತ, ಬಿಆರ್‌ಟಿ, ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಕಾವೇರಿ, ಮಲೆಮಹದೇಶ್ವರ ವನ್ಯಜೀವಿ ಧಾಮದ ಒಟ್ಟು 17, ಮೈಸೂರು ವೃತ್ತದ 3, ಬೆಂಗಳೂರು ವೃತ್ತದ 5, ಬೆಂಗಳೂರಿನ ಅರಣ್ಯ ಸಂಚಾರ ದಳದ 4 ಸೇರಿ ಒಟ್ಟು 29 ಡಿಆರ್‌ಎ್ಒಗಳನ್ನು ನಿಯೋಜನೆಗೊಳಿಸಿದ್ದಾರೆ. ಇವರೆಲ್ಲ ಕರ್ತವ್ಯಕ್ಕೆ ಹಾಜರಾದ ಬಳಿಕ ಸರ್ವೇ ಆರಂಭಗೊಳ್ಳಲಿದೆ.

ಡಿಆರ್‌ಎ್ಒಗಳನ್ನು ಕಚೇರಿ ಮುಖ್ಯಸ್ಥರು ಕೂಡಲೇ ಕಾರ್ಯವಿಮುಕ್ತಿಗೊಳಿಸಿ ಚಾಮರಾಜನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯೂ ಆದ ಚಾ.ನಗರ ವೃತ್ತದ ಪ್ರಭಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಡಿಆರ್‌ಎ್ಒಗಳಿಗೆ ಕರ್ತವ್ಯ ಹಂಚಿಕೆ ಮಾಡಬೇಕು. ಯಾರಾದರೂ ಕಾರ್ಯವರದಿ ಮಾಡದೆ ಇದ್ದಲ್ಲಿ ಶಿಸ್ತು ಕ್ರಮ ಜರುಗಿಸಬೇಕು, ಅನಿವಾರ್ಯ ಕಾರಣದಿಂದ ಸರ್ವೇಯಲ್ಲಿ ಭಾಗವಹಿಸಲು ಆಗದವರ ಸ್ಥಾನಕ್ಕೆ ಬೇರೆ ಸಿಬ್ಬಂದಿ ನಿಯೋಜನೆ ಮಾಡಬೇಕೆಂದು ತಿಳಿಸಿದ್ದಾರೆ.

ಗಡಿ ಮತ್ತು ಅರಣ್ಯ:
ಕರ್ನಾಟಕ ಮತ್ತು ತಮಿಳುನಾಡು ಗಡಿಯ ಮೇಕೆದಾಟು ಎಂಬಲ್ಲಿ ಕಾವೇರಿ ನದಿ ಹರಿಯುತ್ತಿದೆ. ಹನೂರು ಅರಣ್ಯ ವಲಯದ ಒಂಟಿಗುಂಡು ಬಳಿ ಜಲಾಶಯ ನಿರ್ಮಾಣ ಮಾಡಬೇಕೆಂಬ ಚಿಂತನೆ ಇದೆ. ಈ ಯೋಜನೆಗಾಗಿ 4 ಸಾವಿರ ಹೆಕ್ಟೇರ್‌ಗೂ ಹೆಚ್ಚು ಭೂಮಿ ಬೇಕಾಗಿದೆ. ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವಿಸ್ತರಿಸಿರುವ, ಗಿಡ-ಮರ, ವನ್ಯಜೀವಿಗಳಿರುವ ಕಾವೇರಿ ವನ್ಯಜೀವಿಧಾಮ ಅರಣ್ಯ ಪ್ರದೇಶದ ಭೂ ಭಾಗದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಗಡಿಯನ್ನು ಗುರುತಿಸುವುದು ಮತ್ತು ಮರಗಳನ್ನು ಎಣಿಸುವ ಸರ್ವೇ ಮಾಡಲಾಗುತ್ತಿದೆ. ಈ ಭೂಮಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇರುವುದರಿಂದ ಡಿಆರ್‌ಎ್ಒಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಇವರು ಸರ್ವೇ ಕಾರ್ಯ ಆರಂಭಿಸಲು ಚಾಮರಾಜನಗರದ ವೃತ್ತ ಕಚೇರಿಗೆ ಹಾಜರಾಗಬೇಕಿದೆ.

ಬಜೆಟ್‌ನಲ್ಲಿ ಪ್ರಸ್ತಾಪ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು. 7ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಮೇಕೆದಾಟು ಯೋಜನೆ ಜಾರಿ ಕುರಿತು ಪ್ರಸ್ತಾಪಿಸಿದ್ದರು. ಮೇಕದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿ ಮತ್ತು ಪರಿಸರ ತೀರುವಳಿ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ತೀರುವಳಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅರಣ್ಯೀಕರಣಕ್ಕೆ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ಜರುಗಿಸಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು.
ವಿಧಾನಸಭಾ ಚುನಾವಣೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸಿದ್ದರು. ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಈಗ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವರೂ ಆಗಿದ್ದು, ಆಗಾಗ್ಗೆ ಮೇಕೆದಾಟು ಯೋಜನೆ ಜಾರಿ ಕುರಿತು ಮಾತನಾಡುತ್ತಿರುತ್ತಾರೆ.

ಬೆಂಗಳೂರಿನ ದಾಹ ತಣಿಸಲು:
ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು ಮೇಕೆದಾಟು ಯೋಜನೆಯ ಉದ್ದೇಶ. ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಹನೂರು ಅರಣ್ಯ ವಲಯದ ಒಂಟಿಗುಂಡು ಸ್ಥಳದಲ್ಲಿ ಕಾವೇರಿ ನದಿ ಹರಿಯುವ ಪ್ರದೇಶವೇ ಮೇಕೆದಾಟು. ಮೇವು ಅರಸಿ ಬಂದ ಮೇಕೆಗಳು ದಾಟಿದ ಕಾರಣಕ್ಕೆ ಈ ಜಾಗವನ್ನು ಮೇಕೆದಾಟು ಎಂದು ಕರೆಯುತ್ತಾರೆ. ಇಲ್ಲಿ ಜಲಾಶಯ ನಿರ್ಮಾಣ ಮಾಡಿ ಸಮುದ್ರದ ಪಾಲಾಗುವ ಹೆಚ್ಚುವರಿ ನೀರನ್ನು ಸಂಗ್ರಹಿಸುವುದು, ವಿದ್ಯುತ್ ಉತ್ಪಾದನೆ ಮಾಡುವುದು ಯೋಜನೆಯ ಗುರಿ. ಮೇಕೆದಾಟುವಿನಿಂದ ತಮಿಳುನಾಡಿಗೆ ಕಾವೇರಿ ನೀರು ಹರಿದುಹೋಗುತ್ತದೆ. ಹಾಗಾಗಿ, ಈ ಯೋಜನೆ ಜಾರಿ ವಿಚಾರ ಮುನ್ನಲೆಗೆ ಬಂದಾಗಲೆಲ್ಲ ಕರ್ನಾಟಕ ಮತ್ತು ತಮಿಳುನಾಡಿನ ಜನಪ್ರತಿನಿಧಿಗಳ ನಡುವೆ ವಾಗ್ವಾದಗಳು ನಡೆಯುತ್ತವೆ.

ಬಿಳಿಗುಂಡ್ಲು ಸ್ಥಳಾಂತರಕ್ಕೆ ಒತ್ತಾಯ:
ಹನೂರು ತಾಲೂಕಿನ ಹೊಗೇನಕಲ್ ಬಳಿ ಇರುವ ಬಿಳಿಗುಂಡ್ಲು ಜಲಮಾಪನಾ ಕೇಂದ್ರವನ್ನು ಕಾವೇರಿ ನದಿ ಮೆಟ್ಟೂರು ಜಲಾಶಯ ಪ್ರವೇಶಿಸುವ ಕರ್ನಾಟಕದ ಗಡಿ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಹೊಗೇನಕಲ್‌ನಲ್ಲಿ ಜಂಟಿ ಸರ್ವೇ ನಡೆಸಿ ತಮಿಳುನಾಡಿನ ಒತ್ತುವರಿ ತೆರವುಗೊಳಿಸಬೇಕೆಂದು ಚಾ.ನಗರದ ಪರಿಸರವಾದಿ ಪುಣಜನೂರು ದೊರೆಸ್ವಾಮಿ ಈ ಹಿಂದಿನಿಂದಲೂ ಒತ್ತಾಯ ಮಾಡುತ್ತಲೇ ಬಂದಿದ್ದಾರೆ.

ಸರ್ವೇಗಾಗಿ ಡಿಆರ್‌ಎ್ಒಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಡಿಆರ್‌ಎ್ಒಗಳು ಕಾರ್ಯ ಆರಂಭಿಸಲು ಆಗಮಿಸಬಹುದು.-ಮಾಲತಿಪ್ರಿಯಾ, ಪ್ರಭಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ವೃತ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net