ಚಾ.ನಗರ ಶಾಸಕರಿಗೆ ಸರಿಯಾದ ಮಾಹಿತಿಯೇ ಇಲ್ಲ

m.rudresh
Published on

ಚಾಮರಾಜನಗರ: ಕೆಆರ್‌ಐಡಿಎಲ್‌ನಿಂದ 25 ಕೋಟಿ ರೂ. ವೆಚ್ಚದಲ್ಲಿ ಚಾಮರಾಜನಗರ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಕ್ಷೇತ್ರದ ಶಾಸಕರು ಇದರ ಸಂಪೂರ್ಣ ಅರಿವಿಲ್ಲದೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಆರೋಪಿಸಿದರು.


ಪ್ರಗತಿನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಐಡಿಎಲ್‌ನಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಸರ್ಕಾರಕ್ಕೆ ಸಾವಿರ ಕೋಟಿ ರೂ. ನೀಡಲಾಗಿದೆ. ಸಿಎಸ್‌ಆರ್ ಅಡಿ ಚಾಮರಾಜನಗರಕ್ಕೆ 25 ಕೋಟಿ ರೂ. ನೀಡಿದ್ದು, 12.50 ಕೋಟಿ ರೂ. ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಉಳಿದ 12.50 ಕೋಟಿ ರೂ.ಗೆ ಶೀಘ್ರದಲ್ಲೇ ಮಂಜೂರಾತಿ ದೊರೆಯಲಿದೆ. ಸಿಎಸ್‌ಆರ್ ಅನುದಾನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಕ್ಷೇತ್ರದ ಶಾಸಕರನ್ನು ಕರೆಯುವಂತೆ ಶಿಷ್ಟಾಚಾರವಿಲ್ಲ. ಅದರ ಉದ್ಘಾಟನೆಗೆ ಮಾತ್ರ ಕರೆಯಬೇಕು. ಕೆಆರ್‌ಡಿಎಲ್‌ನ ಅನುದಾನದಲ್ಲೇ ಕೆಲಸ ಮಾಡುತ್ತಿರುವುದರಿಂದ ನೇರವಾಗಿ ಕೆಲಸ ಮಾಡಬಹುದಾಗಿದೆ. ಆದರೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಈ ವಿಚಾರವಾಗಿ ಮಾಹಿತಿ ಇಲ್ಲದೆ ಮಾತನಾಡುತ್ತಿದ್ದಾರೆ. ನಾನು ಜಿಲ್ಲಾಕಾರಿ ಅವರನ್ನು ಭೇಟಿಯಾಗಿ ಈ ವಿಚಾರವಾಗಿ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.


ಸಿಎಸ್‌ಆರ್ ಅನುದಾನದಡಿ ಶಿಗ್ಗಾವಿ, ಕನಕಪುರ, ಮಾಗಡಿ ಹಾಗೂ ಕೊಳ್ಳೇಗಾಲದಲ್ಲಿ ಆಕ್ಸಿಜನ್ ಪ್ಲಾಂಟ್ ತೆರೆಯಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಹಿನ್ನೆಲೆಯಲ್ಲಿ ಸಿದ್ಧಗಂಗಾ ಶ್ರೀಗಳ ಹುಟ್ಟೂರು ವೀರಾಪುರ ಅಭಿವೃದ್ಧಿಗೆ ಕೆಆರ್‌ಐಡಿಎಲ್ ಕೈಜೋಡಿಸಿದೆ. ಹನೂರು ಹಾಗೂ ಚಾಮರಾಜನಗರ ತಾಲೂಕಿನ ಎರಡು ಸಾವಿರ ಮಕ್ಕಳಿಗೆ ಉಚಿತ ಟ್ಯಾಬ್ ವಿತರಿಸಲಾಗಿದೆ. ಚಾಮರಾಜನಗರದಲ್ಲಿ ಬೇಡಿಕೆ ಇರುವ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net