

ಚಾಮರಾಜನಗರ: ಜಿಲ್ಲೆಯಲ್ಲಿ ನಗರ ಮತ್ತು ಪಟ್ಟಣವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೌರಕಾರ್ಮಿಕರು ಸಮಸ್ಯೆಗಳಲ್ಲೇ ಬದುಕು ದೂಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ, ಹನೂರು ಹಾಗೂ ಯಳಂದೂರು ಪಟ್ಟಣ ಪಂಚಾಯಿತಿ, ಗುಂಡ್ಲುಪೇಟೆ ಪುರಸಭೆಗಳಲ್ಲಿ ಕಾಯಂ ಆಗಿರುವವರಿಗೆ ಅಡ್ಡಿ ಆತಂಕಗಳಿಲ್ಲ. ನೇರ ನೇಮಕಾತಿ, ಹೊರಗುತ್ತಿಗೆ ನೌಕರರು ಅಭದ್ರತೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೂರು ತಿಂಗಳಿಗೊಮ್ಮೆ ಸಂಬಳ
ಪಟ್ಟಣ ಪಂಚಾಯಿತಿಯಲ್ಲಿ ನಾನು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ 5ನೇ ತಾರೀಖಿನೊಳಗೆ ಸಂಬಳವಾಗುತ್ತಿತ್ತು. ಆದರೀಗ 3 ತಿಂಗಳಿಗೊಮ್ಮೆ ಸಂಬಳವಾಗುತ್ತಿದೆ. ಇದರಿಂದ ಜೀವನ ನಿರ್ವಹಣೆಗೆ ಸಾಲ ಮಾಡಬೇಕಿದೆ. ತುಂಬಾ ತೊಂದರೆಯಾಗಿದೆ. ಆದಾಗ್ಯೂ ಹೇಗೋ ಕೆಲಸ ಮಾಡಿಕೊಂಡು ದಿನ ಕಳೆಯುತ್ತಿದ್ದೇನೆ. ಆದ್ದರಿಂದ ಹನೂರು ಪಟ್ಟಣ ಪಂಚಾಯಿತಿಯವರು ನಮಗೆ ತಿಂಗಳಿಗೊಮ್ಮೆ ಸರಿಯಾಗಿ ಸಂಬಳ ನೀಡಬೇಕು.
>ಗಣೇಶ್, ಪೌರಕಾರ್ಮಿಕ ಪಪಂ ಹನೂರು.
*ಶಿಥಿಲಗೊಂಡಿರುವ ಮನೆಗಳು
ಯಳಂದೂರು ಪಟ್ಟಣದಲ್ಲಿರುವ ಪೌರ ಕಾರ್ಮಿಕರ ಕಾಲನಿಯಲ್ಲಿ ಮನೆಗಳು ಶಿಥಿಲಗೊಂಡಿವೆ. ಕಿರಿದಾದ ರಸ್ತೆ, ಚಿಕ್ಕ ಮನೆಗಳಲ್ಲಿ ಇಕ್ಕಟ್ಟಿನಲ್ಲಿ ಜೀವನ ನಡೆಸುತ್ತಿದ್ದೇವೆ. ನಮಗೆ ತಕ್ಷಣ ವಸತಿ ಸೌಕರ್ಯ ಕಲ್ಪಿಸಿಕೊಡಬೇಕು. ಮಳೆಗಾಲಕ್ಕೂ ಮುನ್ನವೇ ಸೂರು ಸಿಕ್ಕರೆ ನಾವೆಲ್ಲರೂ ಬೀದಿಗೆ ಬೀಳುವುದು ತಪ್ಪುತ್ತದೆ. ಇಲ್ಲವಾದರಲ್ಲಿ ಗುಡಿಸಲು ಮಾಡಬೇಕಾಗುತ್ತದೆ.
>ನಾಗರಾಜು, ಪೌರ ಕಾರ್ಮಿಕ, ಪಪಂ ಯಳಂದೂರು.
*ಆರೋಗ್ಯ ತಪಾಸಣೆ ಮಾಡಿಸಿಲ್ಲ
ನನ್ನ ನಿವೃತ್ತಿಗೆ ಇನ್ನು 7 ವರ್ಷ ಬಾಕಿ ಇದೆ. ಸಂಬಳವನ್ನು ಹೆಚ್ಚಿಸುವಂತೆ ಹನೂರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಲವು ವರ್ಷದಿಂದ ಮನವಿ ಮಾಡುತ್ತಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಕಳೆದ 3 ವರ್ಷದಿಂದ ಆರೋಗ್ಯ ತಪಾಸಣೆ ಮಾಡಿಸಿಲ್ಲ. ಸರ್ಕಾರದಿಂದ ದೊರಕುವ ಕೆಲವು ಸವಲತ್ತುಗಳು ಸಿಗುತ್ತಿಲ್ಲ. ಪ್ರತಿ ತಿಂಗಳು ಸರಿಯಾಗಿ ಸಂಬಳವಾಗುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿದೆ. ಆದ್ದರಿಂದ ಅಧಿಕಾರಿಗಳು ಇತ್ತ ಗಮನಹರಿಸಿ ಪೌರ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು.
>ರಾಮಿ, ಮಹಿಳಾ ಪೌರ ಕಾರ್ಮಿಕರು ಪಪಂ, ಹನೂರು.
ಭದ್ರತೆಗಾಗಿ ಕಾಯಂ ಮಾಡಿ
ಪೌರ ಕಾರ್ಮಿಕರಿಗೆ ತಿಂಗಳ ವೇತನ 10 ದಿನಗಳು ವಿಳಂಬವಾಗೋದು ಬಿಟ್ಟರೆ ತಿಂಗಳಿಗೆ ಸಮರ್ಪಕವಾಗಿ ಸಂಬಳವಾಗುತ್ತದೆ. 36 ನೇರ ಪಾವತಿ ಪೌರಕಾರ್ಮಿಕರನ್ನು ಕಾಯಂ ಮಾಡುವ ವಿಚಾರದ ಮುಖ್ಯಮಂತ್ರಿಗಳ ಅಂಗಳದಲ್ಲಿದೆ. ನಗರದ ಸ್ವಚ್ಛತೆಗೆ ಹಲಿರುಳು ಶ್ರಮಿಸುವ ಎಲ್ಲ ಪೌರಕಾರ್ಮಿಕರಿಗೆ ಸೂಕ್ತ ಭದ್ರತೆ ಸಿಗಬೇಕಾದರೆ ಕಾಯಂ ಮಾಡಬೇಕು.
>ಪಳನಿಸ್ವಾಮಿ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಕೊಳ್ಳೇಗಾಲ.
ಸಮುದಾಯ ಭವನ ಪೂರ್ಣಗೊಳಿಸಿ
ಯಳಂದೂರು ಪಟ್ಟಣದ ಪೌರಕಾರ್ಮಿರ ಬಡಾವಣೆಯಲ್ಲಿರುವ ನಿರ್ಮಾಣಗೊಳ್ಳುತ್ತಿರುವ ಸಮುದಾಯದ ಭವನ ಕಟ್ಟಡವನ್ನು ಬೇಗ ಪೂರ್ಣಗೊಳಿಸಿಕೊಡಬೇಕು. ಪ್ರಸ್ತುತ ಸಮುದಾಯ ಭವನವಿಲ್ಲದೆ ಪೌರಕಾರ್ಮಿಕರ ಮಕ್ಕಳ ಮದುವೆ, ಶುಭ ಸಮಾರಂಭಗಳನ್ನು ಮಾಡಲು ಅಧಿಕ ಹಣ ವ್ಯಯಿಸಬೇಕಾಗಿದೆ. ತಕ್ಷಣ ಭವನ ನಿರ್ಮಿಸಿಕೊಡುವುದರಿಂದ ಅನುಕೂಲವಾಗಲಿದೆ.
>ನಾಗಮ್ಮಮಹಿಳಾ ಪೌರಕಾರ್ಮಿಕರು ಪಪಂ ಯಳಂದೂರು.
ಆರೋಗ್ಯ ನಿರೀಕ್ಷಕರ ಸಹಕಾರ
ಕೊಳ್ಳೇಗಾಲ ನಗರಸಭೆಯಲ್ಲಿ ಕಸದ ವಾಹನಗಳನ್ನು ಚಲಾಯಿಸುವ 18 ಚಾಲಕರು, 3 ಮೇಲ್ವಿಚಾರಕರು, ಒಬ್ಬ ಕಾವಲುಗಾರ ಸೇರಿದಂತೆ 22 ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಕೆಲಸಕ್ಕೆ ನಿಯೋಜಿಸಿದ್ದ ಟೆಂಡರ್ ಅವಧಿ ಮುಗಿದಿರುವುದರಿಂದ 3 ತಿಂಗಳ ಸಂಬಳವಾಗಿರಲಿಲ್ಲ. ಇದೀಗ ಜಿಲ್ಲಾಧಿಕಾರಿಗಳಿಂದ ನೂತನ ಟೆಂಡರ್‌ಗೆ ಅನುಮೋದನೆ ಸಿಕ್ಕಿದೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆರೋಗ್ಯ ನಿರೀಕ್ಷಕ ಚೇತನ್ ಮತ್ತು ಮಹೇಶ್ ಸಹಕಾರದಿಂದ ಸಂಬಳದ ಸೌಲಭ್ಯ ಸಿಗುತ್ತಿದೆ.
>ತ್ಯಾಗರಾಜ್, ಅಧ್ಯಕ್ಷ, ಹೊರಗುತ್ತಿಗೆ ವಾಹನ ಚಾಲಕರ ಸಂಘ ಕೊಳ್ಳೇಗಾಲ.
ಸೌಲಭ್ಯ ಒದಗಿಸಿರುವ ಪುರಸಭೆ
ಗುಂಡ್ಲುಪೇಟೆ ಪುರಸಭೆ ಪೌರಕಾರ್ಮಿಕರಿಗೆ ಎಲ್ಲ ಸವಲತ್ತುಗಳನ್ನು ನೀಡಿದೆ. ನಾವು ಸಹ ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ. ಕೆಲಸದ ವೇಳೆಯಲ್ಲಿ ನಮ್ಮ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಯೂನಿಾರಂ, ಗ್ಲೌಸ್, ಮಾಸ್ಕ್ ಎಲ್ಲವನ್ನೂ ನೀಡಲಾಗಿದೆ. ವಾಸಕ್ಕೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ.
>ಚಿಕ್ಕಮಾದ, ಪೌರಕಾರ್ಮಿಕ, ಪುರಸಭೆ, ಗುಂಡ್ಲುಪೇಟೆ.
ವಸತಿ ಸೌಲಭ್ಯಕ್ಕಾಗಿ ವಿನಂತಿ
ಸರ್ಕಾರದ ವತಿಯಿಂದ ಬರುವ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದಾರೆ, ಸಂಬಳ ಸಕಾಲದಲ್ಲಿ ಸಿಗುತ್ತಿದೆ. ಆದರೆ ಹಲವಾರು ವರ್ಷಗಳಿಂದ ವಸತಿ ಸೌಲಭ್ಯ ಸಿಗದಿರುವ ಕೊರಗು ನಮ್ಮನ್ನು ಕಾಡುತ್ತಿದೆ. ಸೂಕ್ತ ನೆಲೆ ಇಲ್ಲದೆ ಪರದಾಡುತ್ತಿದ್ದೇವೆ. ಮನೆ ಕಟ್ಟಿಸಿಕೊಂಡರೆ ಅದರ ಬಿಲ್ ಪಾವತಿ ಮಾಡುವುದಾಗಿ ಹೇಳಿದ್ದಾರೆ. ಆದರೆ ನಮಗೆ ಅಷ್ಟೊಂದು ಚೈತನ್ಯವಿಲ್ಲ. ಆದ್ದರಿಂದ ನಮಗೆ ಸರ್ಕಾರದ ವತಿಯಿಂದಲೇ ಮನೆ ನಿರ್ಮಿಸಿಕೊಡಬೇಕೆಂದು ವಿನಂತಿಸುತ್ತೇನೆ.
>ಮಾಣಿಕ್ಯ, ಪೌರ ಕಾರ್ಮಿಕ, ತೆರಕಣಾಂಬಿ ಗ್ರಾಪಂ ಗುಂಡ್ಲುಪೇಟೆ.
ಸಂಕಷ್ಟ ಭತ್ಯೆ ಕೊಡಿ
ರಾಜ್ಯ ಬಜೆಟ್‌ನಲ್ಲಿ ೋಷಣೆ ಮಾಡಿದ 2 ಸಾವಿರ ರೂ.ಸಂಕಷ್ಟ ಭತ್ಯೆಯನ್ನೂ ಇನ್ನೂ ನೀಡಿಲ್ಲ. ತಿಂಗಳಿಗೊಮ್ಮೆ ನಿಗದಿತ ದಿನಾಂಕದಂದು ನಮಗೆ ಸಂಬಳ ನೀಡುವಂತಾಗಬೇಕು. ಪ್ರಸ್ತುತ ಸಕಾಲಕ್ಕೆ ಸಂಬಳ ಸಿಗದೆ ಬಡ್ಡಿಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ. 2017-18ನೇ ಸಾಲಿನಲ್ಲಿ ಪೌರಕಾರ್ಮಿಕರ ವಿಶೇಷ ನೇಮಕಾತಿ ಆಧಾರದಲ್ಲಿ 10 ಖಾಲಿ ಹುದ್ದೆಗಳ ಭರ್ತಿಯಾಗಿದೆ. 8 ಖಾಲಿ ಹುದ್ದೆಗಳನ್ನು ರೋಸ್ಟರ್ ಪದ್ಧತಿಗೊಳಪಡಿಸಿದ್ದಾರೆ. ಪೌರಕಾರ್ಮಿಕರ ವೃತ್ತಿಯನ್ನು ತಲೆಮಾರುಗಳಿಂದ ಆದಿದ್ರಾವಿಡರು ತೊಡಗಿಕೊಂಡಿದ್ದು, ಖಾಲಿ ಹುದ್ದೆಗಳನ್ನು ಆದಿ ದ್ರಾವಿಡರಿಗೆ ನೀಡಬೇಕೆಂದು ಮನವಿ ಮಾಡುತ್ತೇನೆ.
>ನಾಗರಾಜು, ಪೌರಕಾರ್ಮಿಕ, ನಗರಸಭೆ, ಚಾಮರಾನಗರ.
ಪೌರಕಾರ್ಮಿಕರ ಕಷ್ಟಗಳಿಗೆ ಸ್ಪಂದನೆ
ಗ್ರಾಪಂ ಪೌರಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ಕೊಡಿಸಲು ಆರ್‌ಡಿಪಿಆರ್ ಅಧಿಕಾರಿಗಳೊಂದಿಗೆ 3 ಸಭೆಗಳನ್ನು ಮಾಡಿ ನಿರ್ದೇಶನ ನೀಡಿದ್ದೇನೆ. ಸದ್ಯದಲ್ಲೇ ಕೆಲವು ಆದೇಶಗಳು ಹೊರಬೀಳಲಿವೆ. ಹನೂರಿಗೆ ನಾನೇ ಖುದ್ದಾಗಿ ಹೋಗಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಸೌಲಭ್ಯಗಳನ್ನು ನೀಡಲು ಮುಖ್ಯಾಧಿಕಾರಿಗೆ ತಿಳಿಸಿದ್ದೆ. ಸ್ಮಶಾನಭೂಮಿಗೆ ಜಾಗ ಗುರುತಿಸಲು ತಹಸೀಲ್ದಾರ್‌ಗೆ ಹೇಳಿದ್ದೇನೆ. ಕಾಯಂ ನೇಮಕಾತಿ ಆದವರಗೆ ಎಲ್ಲ ಸೌಲಭ್ಯ ಸಿಗುತ್ತಿದೆ. ನೇರ ನೇಮಕಾತಿ, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರದ ಹಂತದಲ್ಲಿ 3 ಬಾರಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. 11,133 ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ತಿಂಗಳು ಚಾ.ನಗರದಲ್ಲಿ ಸಭೆ ನಡೆಸಿ ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
>ಎಂ.ಶಿವಣ್ಣ ಕೋಟೆ ಅಧ್ಯಕ್ಷ, ಸಾಯಿ ಕರ್ಮಚಾರಿ ಆಯೋಗ.