ಬಂದೀಗೌಡನಹಳ್ಳಿಯಲ್ಲಿ ಕ್ಷೇತ್ರೋತ್ಸವ

23chn9
Published on

ಚಾಮರಾಜನಗರ: ತಾಲೂಕಿನ ಬಂದೀಗೌಡನಹಳ್ಳಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬುಧವಾರ ಮುಸುಕಿನ ಜೋಳದ ಹೈಬ್ರಿಡ್‌ನ ಪ್ರಾತ್ಯಕ್ಷಿಕೆ ಮತ್ತು ಕ್ಷೇತ್ರೋತ್ಸವ ನಡೆಯಿತು.

ಗ್ರಾಮದ ರೈತ ವೀರಭದ್ರಪ್ಪ ಅವರ ಜಮೀನಿಗೆ ಭೇಟಿ ನೀಡಿದ ಕೃಷಿ ತಜ್ಞರು ಮತ್ತು ವಿಜ್ಞಾನಿಗಳು ಮುಸುಕಿನ ಜೋಳದ ಹೈಬ್ರಿಡ್‌ನ ಪರಿಚಯ ಮಾಡಿಕೊಟ್ಟರು. ಈ ವೇಳೆ ವಿಜ್ಞಾನಿ ಡಾ.ಎಂ.ಕೆ.ಶ್ರುತಿ ಮಾತನಾಡಿ, ಹೈಬ್ರಿಡ್ ಮುಸುಕಿನ ಜೋಳ ಎಂಎಎಚ್-14-138 ತಳಿಯು ಎಲೆ ಅಂಗಮಾರಿ ರೋಗಕ್ಕೆ ಮತ್ತು ಕೇದಿಗೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದ್ದು, ಎಕರೆಗೆ 34 ರಿಂದ 38 ಕ್ವಿಂಟಾಲ್ ಇಳುವರಿ ನೀಡುತ್ತದೆ ಎಂದರು.
ತೆನೆ ಕಟಾವಿಗೆ ಬಂದರೂ ಗಿಡ ಹಸಿರಾಗಿರುತ್ತದೆ. ಆದ್ದರಿಂದ ಉತ್ತಮ ಮೇವಿಗಾಗಿ ಬಳಸಬಹುದು. ತೆನೆ ಉದ್ದವಾಗಿದ್ದು, ಪೂರ್ಣವಾಗಿ ಕಾಳು ತುಂಬಿರುತ್ತದೆ. ಲಘು ಪೋಷಕಾಂಶಗಳಾದ ಸತು ಮತ್ತು ಬೋರಾನ್ ಬಳಕೆಯ ಪ್ರಯೋಜನಗಳ ಬಗ್ಗೆ ವಿವರಣೆ ನೀಡಿದರು.

ಅಂತರದಲ್ಲಿ ಬಿತ್ತನೆ ಮಾಡುವುದರಿಂದ, ನಿರ್ದಿಷ್ಟ ಸಸಿಗಳ ಸಂಖ್ಯೆಯನ್ನು ಕಾಯ್ದುಕೊಂಡು ಉತ್ತಮ ಇಳುವರಿ ಪಡೆಯಬಹುದು. ಬೆಳೆಗಳಲ್ಲಿ ಜೈವಿಕ ಗೊಬ್ಬರಗಳು, ಜೈವಿಕ ಕೀಟನಾಶಕಗಳ ಮತ್ತು ಬೀಜೋಪಚಾರ ಅಳವಡಿಸಿಕೊಂಡು ವ್ಯವಸಾಯ ಕೈಗೊಳ್ಳಬೇಕೆಂದು ಕರೆ ನೀಡಿದರು.
ಕೇಂದ್ರದ ಸಸ್ಯರೋಗ ತಜ್ಞ ಡಾ.ಪೊಂಪನಗೌಡ ಮಾತನಾಡಿ, ಮುಸುಕಿನ ಜೋಳದ ಬೆಳೆಗಳಲ್ಲಿ ಕಂಡು ಬರುವ ಹುಳು, ಕೀಟ ಮತ್ತು ರೋಗಗಳ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಾದ ಮಾಗಿ ಉಳುಮೆ, ಬೀಜೋಪಚಾರ, ಆಕರ್ಷಕ ಬೆಳೆಗಳು, ಜೈವಿಕ ಸೂಕ್ಷ್ಮಾಣು ಜೀವಿಗಳಿಂದ ಸಗಣಿ ಗೊಬ್ಬರದ ಮೌಲ್ಯವರ್ಧನೆ ಹಾಗೂ ಅವಶ್ಯಕತೆಗನುಗುಣವಾಗಿ ಸಸ್ಯ ಸಂರಕ್ಷಕಗಳ ಬಳಕೆಯ ಕುರಿತು ಮಾಹಿತಿ ನೀಡಿದರು. ಕೃಷಿ ಹವಾಮಾನ ತಜ್ಞ ಎಚ್.ಪಿ.ರಜತ್ ಮಾತನಾಡಿ, ಹವಾಮಾನ ಸ್ಥಿತಿಗೆ ಶಿಫಾರಸು ಮಾಡಿದ ತಳಿಗಳನ್ನು ಬೆಳೆಸಬೇಕು ಹಾಗೂ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net