

ಚಾಮರಾಜನಗರ: ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ (ನೈಸ್ ಕಾರಿಡಾರ್ ಪಕ್ಕ) ಚನ್ನವೀರಯ್ಯನ ಪಾಳ್ಯದ ಸೋಂಪುರದಲ್ಲಿ ಕಡಲೆಕಾಯಿ ಪರಿಷೆ ಮತ್ತು ಶ್ರೀ ಬಸವೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಮರಾಜನಗರ ತಾಲೂಕಿನ ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು.
ಕುಸ್ತಿ ಗ್ರಾಮೀಣ ಭಾಗದ ದೇಸಿ ಕ್ರೀಡೆಯಾಗಿದ್ದು, ಇಂತಹ ಗ್ರಾಮೀಣ ಕ್ರೀಡೆಯನ್ನು ಪೋತ್ಸಾಹಿಸುವ ಕೆಲಸ ಆಗಬೇಕು. ಕುಸ್ತಿಪಟುಗಳು ಸ್ಪರ್ಧಾತ್ಮಕ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ಪಂದ್ಯಾವಳಿಯಲ್ಲಿ 40ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು. ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್, ಕನಕಪುರ ಪ್ರಾಕಾರ ಯೋಜನೆ ಅಧ್ಯಕ್ಷ ಜಗನ್ನಾಥ್, ಚಾಮರಾಜನಗರ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಇತರರು ಹಾಜರಿದ್ದರು.